ಮುಂಬೈ: ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಜೊತೆಗೆ ಶಿವಸೇನೆಯನ್ನಯ (ಯುಬಿಟಿ) ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಒಂದೆಡೆ ಪ್ರಧಾನಿ ಮೋದಿ ನಿಮ್ಮನ್ನು ಸಮಾಧಿ ಮಾಡುತ್ತಾರೆ ಎಂದು ಹೇಳಿಕೆ ನೀಡುತ್ತಾರೆ.
ಇನ್ನೊಂದೆಡೆ ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದೆ. ಮೋದಿಯನ್ನು ಮಣ್ಣಿನಲ್ಲಿ ಹೂತು ಹಾಕುವ ಕನಸುಕಾಣುತ್ತಿದ್ದಾರೆ. ಅವರ ರಾಜಕೀಯ ದುರುದ್ದೇಶ ಎಷ್ಟು ಕೆಟ್ಟದಾಗಿದೆ. ದೇಶದ ತಾಯಂದಿರು ಮತ್ತು ಸಹೋದರಿಯರ ಶ್ರೀರಕ್ಷೆ ನನ್ನ ಮೇಲೆ ಇರುವವರಿಗೂ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ನಕಲಿ ಶಿವಸೇನೆ ಸದಸ್ಯರು ತಮ್ಮೊಂದಿಗೆ ಬಾಂಬ್ ಸ್ಫೋಟದ ಅಪರಾಧಿಗಳನ್ನು ಪ್ರಚಾರಕ್ಕೆ ಕರೆದೊಯ್ಯಲು ಪ್ರಾರಂಭಿಸಿದ್ದಾರೆ. ಮೇವು ಹಗರಣದ ಆರೋಪಿಯೊಬ್ಬನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬಿಹಾರ ಸುತ್ತಾಡುತ್ತಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಕಿದರು. ನಾನು ಕಾಂಗ್ರೆಸ್ ರಾಜಮನೆತನದಂತಹ ದೊಡ್ಡ ಕುಟುಂಬದಿಂದ ಬಂದವನಲ್ಲ, ಆದರೆ ನಾನು ಬಡತನದಲ್ಲಿ ಬೆಳೆದಿದ್ದೇನೆ.
ಎಷ್ಟು ಕಷ್ಟಗಳು ಬಂದಿವೆ ಎಂಬುದು ನನಗೆ ಗೊತ್ತು. ನಿಮ್ಮ ಜೀವನದಲ್ಲೂ ಕಷ್ಟಗಳ ಪರ್ವತಗಳಿವೆ. ಅನೇಕ ಬುಡಕಟ್ಟು ಕುಟುಂಬಗಳಿಗೆ ಶಾಶ್ವತ ಮನೆಗಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಇನ್ನೂ ಕೆಲವು ಹಳ್ಳಿಗಳಿಗೆ ವಿದ್ಯುತ್ ಸಿಕ್ಕಿಲ್ಲ. ಅವರೆಲ್ಲರಿಗೂ ನಾನು ಸೇವೆ ಸಲ್ಲಿಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.