ನವದೆಹಲಿ : ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಆಕ್ರೋಶ ಹೆಚ್ಚುತ್ತಿರುವ ಮಧ್ಯೆ ಮಾಲ್ಡೀವ್ಸ್ ಸರ್ಕಾರ ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಕ್ಯಾಬಿನೆಟ್ ಶಿಫಾರಸಿನ ನಂತರ ಇಸ್ರೇಲಿ ಪಾಸ್ಪೋರ್ಟ್ದಾರರ ಮೇಲೆ ನಿಷೇಧವನ್ನು ಹೇರಲು ನಿರ್ಧರಿಸಿದ್ದಾರೆ. ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಅಗತ್ಯ ಕಾನೂನುಗಳನ್ನು ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಇದರ ಮೇಲ್ವಿಚಾರಣೆಗೆ ಉಪಸಮಿತಿಯನ್ನು ಸ್ಥಾಪಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ಈ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ಭಾರತದಲ್ಲಿನ ಇಸ್ರೇಲಿ ರಾಯಭಾರ ಕಚೇರಿ ಅಲರ್ಟ್ ಆಗಿದೆ. ತನ್ನ ಇಸ್ರೇಲಿ ನಾಗರಿಕರಿಗೆ ಮಾಲ್ಡೀವ್ಸ್ ಬದಲು ಭಾರತದ ಕಡಲತೀರಗಳಿಗೆ ಭೇಟಿ ನೀಡುವಂತೆ ಹೇಳುವ ಮೂಲಕ ತಿರುಗೇಟು ನೀಡಿದೆ. ಮಾಲ್ಡೀವ್ಸ್ ಇನ್ನು ಮುಂದೆ ಇಸ್ರೇಲಿಗಳನ್ನು ಸ್ವಾಗತಿಸುತ್ತಿಲ್ಲವಾದ್ದರಿಂದ, ಇಸ್ರೇಲಿ ಪ್ರವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸುವ, ಅತ್ಯುತ್ತಮ ಆತಿಥ್ಯ ನೀಡುವ ಸುಂದರವಾದ ಮತ್ತು ಅದ್ಭುತವಾದ ಭಾರತೀಯ ಕಡಲತೀರಗಳು ಇಲ್ಲಿವೆ. ನಮ್ಮ ರಾಜತಾಂತ್ರಿಕರು ಭೇಟಿ ನೀಡಿದ ಸ್ಥಳಗಳ ಆಧಾರದ ಮೇಲೆ ಈ ಶಿಫಾರಸುಗಳನ್ನು ಪರಿಶೀಲಿಸಿ ಎಂದು ಇಸ್ರೇಲಿ ರಾಯಭಾರ ಕಚೇರಿಯ ಪೋಸ್ಟ್ ಹೇಳಿದೆ. ಪೋಸ್ಟ್ನಲ್ಲಿ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ ಮತ್ತು ಕೇರಳದ ಕಡಲತೀರಗಳ ಚಿತ್ರಗಳಿವೆ.
