ನವದೆಹಲಿ : ಪ್ಯಾಲೆಸ್ತೀನ್ ಹಮಾಸ್ ಉಗ್ರಗಾಮಿಗಳು ಗಾಜಾಪಟ್ಟಿಯಿಂದ ಆಪರೇಷನ್ ಅಲ್-ಅಕ್ಸಾ ಫ್ಲಡ್ ಹೆಸರಿನಲ್ಲಿ ನಿದ್ದೆಯಲ್ಲಿ ಮಲಗಿದ್ದ ಇಸ್ರೇಲಿಗರ ಮೇಲೆ 5 ಸಾವಿರ ರಾಕೆಟ್ ಮಳೆಗರೆದಿದ್ದಾರೆ. ಇಸ್ರೇಲ್‌ನ ದಕ್ಷಿಣ ಇಸ್ರೇಲ್, ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಅಪಾರ ಸಾವು-ನೋವಾಗಿದೆ. 35 ಎಕರೆ ಭೂಭಾಗ ನಮಗೆ ಸೇರಿದ್ದು ಅಂತ ಘೋಷಣೆ ಮೊಳಗಿಸಿದ್ದಾರೆ. ಗಡಿ ಪಟ್ಟಣ ಸ್ಡೆರೊಟ್, ಮುಂದುವರಿಯುತ್ತಾ ರಾಜಧಾನಿ ಟೆಲ್ ಅವಿವ್ ಮೇಲೂ ಹಮಾಸ್ ಉಗ್ರರು ಕ್ಷಿಪಣಿ ದಾಳಿ ಮಾಡಿದ್ದಾರೆ. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ಕೂಡ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಆಕ್ರೋಶಗೊಂಡಿದ್ದು, ಸ್ವೋರ್ಡ್ ಆಫ್ ಐರನ್ ಹೆಸರಿನಲ್ಲಿ ಆಪರೇಷನ್ ಆರಂಭಿಸಿ, ಪ್ಯಾಲೆಸ್ತೀನ್‌ನ ಹಮಾಸ್ ಮೇಲೆ ಸಮರ ಸಾರಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ ಜೊತೆಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಲಿಯಾದ ಮುಗ್ಧ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು, ತನ್ನ ದೇಶದ ಜನತೆ ಸುರಕ್ಷಿತ ಬಂಕರ್‌ಗಳಿಗೆ ತೆರಳುವಂತೆ ಕರೆ ನೀಡಿದ್ದು, ನಮ್ಮನ್ನು ಕೆಣಕಿರುವ ಹಮಾಸ್ ಉಗ್ರರು ತಪ್ಪು ಮಾಡಿದ್ದಾರೆ. ಅವರು ತಕ್ಕ ಬೆಲೆ ತೆರಲೇಬೇಕು ಅಂತ ಇಸ್ರೇಲ್ ಪ್ರಧಾನಿ ಗುಡುಗಿದ್ದಾರೆ. ಜೆರುಸಲೇಂನಲ್ಲಿ ದಾಳಿಯ ಸೈರನ್ ಮೊಳಗಿಸಲಾಗಿದೆ. ಹಮಾಸ್ ಬಂಡುಕೋರರ ದಾಳಿಯನ್ನು ವಿಶ್ವದ ರಾಷ್ಟ್ರಗಳು ಖಂಡಿಸಿವೆ.