ದೆಹಲಿ/ಬೆಂಗಳೂರು : ವೈಯಕ್ತಿಕ ಪ್ರತಿಷ್ಠೆ ಸೇರಿದಂತೆ ಮತ್ತಿತರ ರಾಜಕೀಯ ಕಾರಣಗಳಿಂದ ಆರಂಭವಾದ ಯುದ್ಧದ ಪರಿಣಾಮ ಗಾಜಾಪಟ್ಟಿ ರಣಾಂಗಣವಾಗಿ ಪರಿಣಮಿಸಿದ್ದು, ಅಲ್ಲಿ ನೆಲೆಸಿರುವ ನಮ್ಮ ಭಾರತೀಯ ಪ್ರಜೆಗಳ ರಕ್ಷಣಾ ಕಾರ್ಯಕ್ಕೆ ಕೇಂದ್ರ ಮುಂದಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ವಿವಿಧ ಉದ್ದೇಶಗಳಿಂದ ಇಸ್ರೇಲ್ ನಲ್ಲಿ ನೆಲೆಸಿರುವ ನಮ್ಮ ದೇಶದ ನಾಗರಿಕರನ್ನು ಮತ್ತು ಪ್ರವಾಸಕ್ಕೆಂದು ತೆರಳಿದವರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರುವ ಕುರಿತಂತೆ ಚರ್ಚಿಸಲಾಯಿತು. ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಧಾನಿಯವರು, ಇಸ್ರೇಲ್ ನಲ್ಲಿರೋ ಭಾರತದ ಸುಮಾರು 18,000 ದಷ್ಟು ಮಂದಿಯನ್ನು ಮೊದಲಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಆ ಬಳಿಕ ಅವರನ್ನು ಸ್ವದೇಶಕ್ಕೆ ಕರೆತರಬೇಕು. ಈ ನಿಟ್ಟಿನಲ್ಲಿ ಉಭಯ ದೂತಾವಾಸ ಕಚೇರಿಗಳ ಅಧಿಕಾರಿಗಳು ಪ್ರಕ್ರಿಯೆ ಶುರು ಮಾಡಬೇಕು. ಅದಕ್ಕಾಗಿ ವಿಶೇಷ ವಿಮಾನಗಳನ್ನು ಕಳುಹಿಸಿಕೊಡಬೇಕೆಂದು ಪ್ರಧಾನಿಯವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. ಇತ್ತ, ಇಸ್ರೇಲ್ ನಲ್ಲಿರೋ ನಮ್ಮ ರಾಜ್ಯದ ಜನರ ರಕ್ಷಣೆಗೂ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಇಸ್ರೇಲ್ ನಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಈಗಾಗಲೇ ಅಗತ್ಯ ಕ್ರಮಕ್ಕೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಣಿ ಸಭೆಯ ಹಿನ್ನೆಲೆ ನಿನ್ನೆ ದೆಹಲಿಗೆ ಆಗಮಿಸಿದ ಅವರು, ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಬೆಂಗಳೂರು ಸೇರಿದಂತೆ ಇಸ್ರೇಲ್ ನಲ್ಲಿರುವ ರಾಜ್ಯದ ನಾಗರಿಕರ ಸುರಕ್ಷತೆಗಾಗಿ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು. ಸಹಾಯವಾಣಿ ನಂಬರ್ ಗಳು ಹೀಗಿವೆ: 080-22340676/080-22253707 ಇಸ್ರೇಲ್ ಮೇಲೆ ಪ್ಯಾಲೇಸ್ತೇನ್ ನ ಹಮಾಸ್ ಉಗ್ರರು ಮೊನ್ನೆಯಿಂದಲೇ ರಾಕೆಟ್ ದಾಳಿ ನಡೆಸಿದ್ದು, ಎರಡೂ ಶತ್ರು ರಾಷ್ಟ್ರಗಳ ನಡುವೆ ಭೀಕರ ಯುದ್ಧ ಆರಂಭಗೊಂಡಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ ಯುದ್ಧದಲ್ಲಿ ಸೈನಿಕರು, ನಾಗರಿಕರು ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.