ಇತ್ತೀಚೆಗೆ ಇಸ್ರೋ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ಸೂರ್ಯನ ಅಧ್ಯಯನದತ್ತ ದೃಷ್ಟಿ ಹರಿಸಿದೆ. ಈ ಮಧ್ಯೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರ ವೇತನ ಎಷ್ಟಿರಬಹುದು ಎನ್ನುವ ಪ್ರಶ್ನೆ ಅನೇಕರಿಗೆ ಕಾಡಿದ್ದು ಸುಳ್ಳಲ್ಲ. ಆಗಾಗ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳುವ ಆರ್.ಪಿ.ಜಿ. ಗುಂಪಿನ ಅಧ್ಯಕ್ಷ, ಉದ್ಯಮಿ ಹರ್ಷ್ ಗೋಯೆಂಕಾ ಸೋಮನಾಥ್ ಅವರ ವೇತನದ ಬಗ್ಗೆ ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಮನಾಥ್ ವೇತನ ಎಷ್ಟು?
ವಿಜ್ಞಾನಿ ಸೋಮನಾಥ್ ಪ್ರತಿ ತಿಂಗಳು 2.5 ಲಕ್ಷ ರೂ. ವೇತನ ಪಡೆದುಕೊಳ್ಳುತ್ತಾರೆ ಎಂದು ಹರ್ಷ್ ಗೊಯೆಂಕಾ ತಿಳಿಸಿದ್ದಾರೆ. ಜೊತೆಗೆ ಇದು ನ್ಯಾಯ ಸಮ್ಮತ ವೇತನ ಹೌದೇ? ಎಂದು ನೆಟ್ಟಿಗರಲ್ಲಿ ಹರ್ಷ್ ಪ್ರಶ್ನಿಸಿದ್ದಾರೆ.
ಸೋಮನಾಥ್ ಅವರ ಬದ್ದತೆ ಮತ್ತು ಸಂಶೋಧನೆಯೆಡೆಗಿನ ಕುತೂಹಲವನ್ನು ಹರ್ಷ್ ಹೊಗಳಿದ್ದಾರೆ. ಸೋಮನಾಥ್ ನಂತಹವರು ಹಣವನ್ನೂ ಮೀರಿದ ಅಂಶಗಳಿಂದ ಜನರಿಗೆ ಸ್ಫೂರ್ತಿಯಾಗುತ್ತಾರೆ. ಅವರು ದೇಶಕ್ಕಾಗಿ ಕೊಡುಗೆ ನೀಡುತ್ತಾರೆ. ಅವರಂತಹ ಬದ್ದತೆ ಹೊಂದಿರುವ ವ್ಯಕ್ತಿಗಳಿಗೆ ನಾನು ತಲೆ ಬಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿವಿಧ ಕಮೆಂಟ್
ಸದ್ಯ ಹರ್ಷ್ ಅವರ ಪೋಸ್ಟ್ ವೈರಲ್ ಆಗಿದ್ದು, 7 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಸೋಮನಾಥ್ ಅವರಂತಹ ಮಹಾನ್ ವ್ಯಕ್ತಿಗಳ ಕೊಡುಗೆ ಅಳೆಯಲು ಸಾಧ್ಯವಿಲ್ಲ. ಅವರು ದೇಶಕ್ಕಾಗಿ ಸಲ್ಲಿಸುವ ಸೇವೆ, ಕೈಗೊಳ್ಳುವ ಸಂಶೋಧನೆ ಅಮೋಘವಾದುದು. ಅವರು ಯುವಜನತೆಗೆ ನಿಜವಾದ ಪ್ರೇರಣೆ. ಸಮಾಜಕ್ಕೆ ಅವರ ಕೊಡುಗೆ ವರ್ಣಿಸಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾರೆ.
ಸೋಮನಾಥ್ ತಿಂಗಳಿಗೆ 25 ಲಕ್ಷ ರೂ. ಅಥವಾ ಅದಕ್ಕಿಂತ ಅಧಿಕ ವೇತನ ಪಡೆಯಲು ಅರ್ಹರು. ಅವರ ಪ್ರತಿಭೆಯನ್ನು ನಾವು ಗುರುತಿಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.