‘ಇ.ಡಿ. ಪ್ರಾಮಾಣಿಕ ತನಿಖೆಗೆ ಕಲ್ಲು ಹಾಕುವ ಪ್ರಯತ್ನ ಅಕ್ಷಮ್ಯ ಅಪರಾಧ, ಸಿಎಂ ಹೆದರಿಕೊಂಡಂತಿದೆ’-ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿಗಳು ಹಗರಣದಲ್ಲಿ ಸಿಲುಕಿಹಾಕಿಕೊಂಡು ಬಹಳ ಹೆದರಿಕೊಂಡಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪರಿಶಿಷ್ಟರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ 187 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆಯಲಾಗಿದೆ. ಹೊರ ರಾಜ್ಯಕ್ಕೆ ಹಣ ವರ್ಗಾವಣೆ ಮಾಡಿ, ಲೂಟಿ ಮಾಡಿ ಹೆಂಡ ಖರೀದಿ ಮಾಡಿದ್ದು ಕೂಡ ಇವತ್ತು ಬಹಿರಂಗವಾಗಿದೆ. ಇ.ಡಿ. ಈ ಸಂಬಂಧ ಪ್ರಾಮಾಣಿಕ ತನಿಖೆ ಮಾಡುತ್ತಿದೆ. ಅದಕ್ಕೂ ಕಲ್ಲು ಹಾಕುವ ಪ್ರಯತ್ನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

ನೀವು ಪ್ರಾಮಾಣಿಕರೇ ಇದ್ದರೆ ತಾವೇ ರಚಿಸಿದ ಎಸ್‍ಐಟಿ, ಕೂಡಲೇ ನಾಗೇಂದ್ರರಿಗೆ ನೋಟಿಸ್ ಕೊಟ್ಟು ತನಿಖೆಗೆ ಕರೆಸಬೇಕಿತ್ತಲ್ಲವೇ? ತಕ್ಷಣ ನಿಗಮದ ಅಧ್ಯಕ್ಷ ದದ್ದಲ್ ಅವರ ತನಿಖೆಯೂ ನಡೆಯಬೇಕಿತ್ತಲ್ಲವೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರವು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಇದರ ಕುರಿತು ಸಿಬಿಐ, ಇ.ಡಿ. ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು

Advertisement

ಸಿಎಂ ಅವರು ಪ್ರಾಮಾಣಿಕರಾಗಿದ್ದರೆ ಇ.ಡಿ, ಸಿಬಿಐ ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಿನ್ನೆ ಜಾರಿ ನಿರ್ದೇಶನಾಲಯದ (ಇ.ಡಿ.) ವಿರುದ್ಧ ಘೋಷಣೆ ಕೂಗಿ ಹೋರಾಟ ಮಾಡಿದ್ದಾರೆ. ರಾಜ್ಯ ಸರಕಾರ, ಮುಖ್ಯಮಂತ್ರಿಗಳ ಹಾಗೂ ಸಚಿವರ ನಡವಳಿಕೆಯನ್ನು ಗಮನಿಸಿದರೆ ನಿಜಕ್ಕೂ ಅಯ್ಯೋ ಅನಿಸುತ್ತದೆ ಎಂದು ನುಡಿದರು.

ದೊಡ್ಡ ದೊಡ್ಡ ತಲೆಗಳೂ ಉರುಳಲಿವೆ:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕೇವಲ ನಾಗೇಂದ್ರ ಅಷ್ಟೇ ಅಲ್ಲ; ದೊಡ್ಡ ದೊಡ್ಡ ತಲೆಗಳೂ ಉರುಳಲಿವೆ. ಮುಖ್ಯಮಂತ್ರಿಗಳು ಡೆತ್ ನೋಟ್ ಓದುವಾಗ ತಮಗೆ ಬೇಕಾದ ವಿಷಯಗಳನ್ನಷ್ಟೇ ಓದಿದ್ದಾರೆ ಎಂದು ಆಕ್ಷೇಪಿಸಿದರು.

ಒಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮತ್ತೊಂದೆಡೆ ಮೂಡ ಹಗರಣ ಇದೆ. ಮೂಡ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಕೂಡ ಸಿಲುಕಿದ್ದಾರೆ. ಇವರೆಡು ಹಗರಣಗಳ ಕುರಿತು ಜನತೆಗೆ ತಿಳಿಸಿದ್ದೇವೆ. ವಿರೋಧ ಪಕ್ಷವಾಗಿ ನಿರಂತರವಾಗಿ ಹೋರಾಟವನ್ನೂ ಹಮ್ಮಿಕೊಂಡಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement