ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಹಿನ್ನೆಲೆ ಮಾಜಿ ಸಚಿವ ಸಿಟಿ ರವಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಬದಲಾಗದೇ ಇರೋದು ಕಾರ್ಯಕರ್ತ ಅನ್ನೋದು. ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ನೇಮಕ ಮಾಡಿದೆ. ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟುವ, ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ, ಯಶಸ್ವಿಯಾಗಲಿ ಎಂದು ತಿಳಿಸಿದರು.
ನೂತನ ಅಧ್ಯಕ್ಷನ ಆಯ್ಕೆ ಬಗ್ಗೆ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸಮಾಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೂ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗ ಏನಾದರೂ ಮಾತನಾಡಿದರೇ ನಮ್ಮ ಮಾತು ನಮಗೆ ತಿರುಗುಬಾಣವಾಗಲಿದೆ ಎಂದು ಹೇಳಿದರು.