ಈಡಿಗರ ಸಮುದಾಯದ ಬೆಂಬಲದಿಂದ ನಾನು ಮಂತ್ರಿ.! ಡಿ.ಸುಧಾಕರ್

WhatsApp
Telegram
Facebook
Twitter
LinkedIn

ಚಿತ್ರದುರ್ಗ : ಹಿಂದಿನಿಂದಲೂ ಈಡಿಗರ ಸಮುದಾಯದ ಜೊತೆ ನಮ್ಮ ಕುಟುಂಬ ಉತ್ತಮ ಬಾಂಧವ್ಯವಿಟ್ಟುಕೊಂಡಿದೆ. ನನ್ನ ಚಿಕ್ಕಪ್ಪ ಜಯಣ್ಣನವರನ್ನು ರಾಜಕೀಯಕ್ಕೆ ತಂದಿದ್ದು, ಈ ಜನಾಂಗ. ನಿಮ್ಮ ಬೆಂಬಲದಿಂದಲೇ ನಾನೂ ಕೂಡ ಈಗ ಮಂತ್ರಿಯಾಗಿದ್ದೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಈಡಿಗರ ಜೊತೆಯಿರುವ ಅನ್ಯೋನ್ಯತೆಯನ್ನು ಮೆಲುಕು ಹಾಕಿದರು.

ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಆರ್ಯ ಈಡಿಗರ ಸಂಘದ ರಜತ ಮಹೋತ್ಸವ, ಬ್ರಹ್ಮಶ್ರಿ ನಾರಾಯಣ ಗುರುಗಳ 170 ನೇ ಜಯಂತಿ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಜನಾಂಗದ ಬಡ ಮಹಿಳೆಯರ ಸ್ವಾವಲಂಬನೆಗೆ ಸಹಾಯ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ದಿವಂಗತ ಡಿ.ದೇವರಾಜ ಅರಸು, ಹೆಚ್.ಆರ್.ಬಸವರಾಜಪ್ಪನವರಿಂದ ನಮ್ಮ ಕುಟುಂಬ ರಾಜಕೀಯ ಪ್ರವೇಶಿಸಿತು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಆರ್.ಎಲ್.ಜಾಲಪ್ಪ ಇವರುಗಳು ಈಡಿಗ ಸಮುದಾಯದವರು. ಈಡಿಗರ ರಕ್ತದಲ್ಲಿಯೇ ಸಮಾಜಕ್ಕೆ ಸಹಾಯ ಮಾಡುವ ಶಕ್ತಿಯಿದೆ. ಚಳ್ಳಕೆರೆಯಲ್ಲಿ ನಾನು ಡಿಸ್ಟಿಲರಿ ಆರಂಭಿಸಿದಾಗ ಈಡಿಗರು ಸ್ಪಿರಿಟ್ ಪೂರೈಸುತ್ತಿದ್ದುದನ್ನು ನೆನಪಿಸಿಕೊಂಡರು.

ಚಿತ್ರದುರ್ಗದಲ್ಲಿ ಹಾಸ್ಟೆಲ್, ಸಮುದಾಯ ಭವನ ನಿರ್ಮಾಣಕ್ಕೆ ಬೇಡಿಕೆಯಿಟ್ಟಿದ್ದೀರ. ನಾನು ಮಂತ್ರಿಯಾಗಿ ಒಂದು ವರ್ಷ ನಾಲ್ಕು ತಿಂಗಳಾಗಿದೆ. ಇದುವರೆವಿಗೂ ನೀವುಗಳು ನನ್ನನ್ನು ಏನು ಕೇಳಿಲ್ಲ. ಹಿರಿಯೂರಿನವರು ಕೇಳಿದ್ದರಿಂದ ಅಲ್ಲಿಗೆ ಎರಡು ಕೋಟಿ ರೂ.ಗಳನ್ನು ನೀಡಿದ್ದೇನೆ. ಚಿತ್ರದುರ್ಗದಲ್ಲಿ ಎಲ್ಲಿಯಾದರೂ ಜಾಗ ಗುರುತಿಸಿ ಐದು ಎಕರೆ ಭೂಮಿ ಮಂಜೂರು ಮಾಡಿ ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರದಿಂದ ಕೊಡಿಸುತ್ತೇನೆಂದು ಡಿ.ಸುಧಾಕರ್ ಭರವಸೆ ನೀಡಿದರು.

ಶಿಕ್ಷಣದಿಂದ ಮಾತ್ರ ಉದ್ದಾರವಾಗಲು ಸಾಧ್ಯ. ಅದಕ್ಕಾಗಿ ಮೊದಲು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಈಡಿಗ ಸಮುದಾಯಕ್ಕೆ ಕರೆ ನೀಡಿದರು.

ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಜೀವನ್ ಪ್ರಾಸ್ತಾವಿಕವಾಗಿ ಮಾತನಾಡಿ ಈಡಿಗರ ಜನಾಂಗದ ಮಕ್ಕಳ ಶಿಕ್ಷಣಕ್ಕೆ ಚಿತ್ರದುರ್ಗದಲ್ಲಿ ಹಾಸ್ಟೆಲ್, ಸಮುದಾಯ ಭವನ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಪ್ರತಿ ವರ್ಷವೂ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಿ ಶಿಕ್ಷಣಕ್ಕೆ ಉತ್ತೇಜನ ಕೊಡುತ್ತಿದ್ದೇವಲ್ಲದೆ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದೇವೆಂದು ಹೇಳಿದರು.

ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ನಾರಾಯಣ ಗುರು ಮಹಾಸಂಸ್ಥಾನ ಗರ್ತಿಕೆರೆ, ಅಮೃತ ತೀರ್ಥಹಳ್ಳಿ ತಾಲ್ಲೂಕಿನ ರೇಣುಕಾನಂದ ಸ್ವಾಮೀಜಿ ಇವರುಗಳು ಸಾನಿಧ್ಯ ವಹಿಸಿದ್ದರು.

ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕರ್ನಾಟಕ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ಡಾ.ತಿಮ್ಮೇಗೌಡ, ಜೆ.ಪಿ.ಎನ್.ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಸುಧಾಕರ್, ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್.ಶಂಕರ್, ಜಿಲ್ಲಾ ಆರ್ಯ ಈಡಿಗರ ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ಅನುರಾಧ

ರವಿಕುಮಾರ್, ಜಿಲ್ಲಾ ಆರ್ಯ ಈಡಿಗರ ಯುವ ವೇದಿಕೆ ಅಧ್ಯಕ್ಷ ಎಸ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಜೆ.ಆರ್.ಅಜಯ್ಕುಮಾರ್, ಜಿಲ್ಲಾ ಸಂಘದ ಉಪಾಧ್ಯಕ್ಷ ಟಿ.ಸ್ವಾಮಿ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon