ಕೂದಲು ಉದುರುವುದು ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಒತ್ತಡದ ಜೀವನ, ಫಾಸ್ಟ್ ಫುಡ್ ಗಳ ಮೊರೆ ಹೋಗಿ ಪೋಷಕಾಂಶಗಳ ಆಹಾರ ಸೇವಿಸದೇ ಇರುವುದು, ನಿದ್ದೆ ಇಲ್ಲದಿರುವುದು, ನೀರಿನ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಕೂದಲು ಉದುರುತ್ತದೆ.ಕೆಲವೊಂದು ಸರಳ ಮನೆ ಮದ್ದಿನ ಪ್ರಯೋಗ ಮಾಡಿ ತಲೆ ಹೊಟ್ಟು, ಕೂದಲು ಉದುರುವುದನ್ನು ತಡೆಗಟ್ಟಬಹುದು. ಈರುಳ್ಳಿ ಈ ಎಲ್ಲಾ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿ ನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲ ಎಲ್ಲಾ ಸಮಸ್ಯೆಗಳು ಬಹುಬೇಗ ಕಡಿಮೆಯಾಗುತ್ತದೆ. ತಲೆ ಕೂದಲಿಗೆ ನಾವು ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಬಳಸುತ್ತೇವೆ. ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ರಸ ಉಪಯೋಗಿಸುವುದು ತಲೆ ಕೂದಲಿಗೆ ಇನ್ನೂ ಉತ್ತಮ, 2 ಚಮಚ ತೆಂಗಿನ ಎಣ್ಣೆಯೊಂದಿಗೆ 1 ಚಮಚ ಈರುಳ್ಳಿ ರಸ ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಕೂದಲು ಸ್ವಚ್ಛಗೊಳಿಸಿ.ಇದರ ಬದಲಾಗಿ ಈರುಳ್ಳಿ ಎಣ್ಣೆ ತಯಾರಿಸಿಯೂ ಬಳಸಬಹುದು. ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಈರುಳ್ಳಿ ರಸ ತೆಗೆದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಆ ಎಣ್ಣೆಗೆ ಈರುಳ್ಳಿ ರಸ ಸೇರಿಸಿ ಬಿಸಿ ಮಾಡಿಕೊಳ್ಳಬೇಕು. ಬಿಸಿ ಮಾಡಿದ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು, ತಣ್ಣಗಾದ ಮೇಲೆ ಆ ಎಣ್ಣೆಯನ್ನು ತಲೆಯ ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಹಚ್ಚಿಕೊಳ್ಳಿ.ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಅದಕ್ಕೆ ಒಂದು ಚಮಚ ಆಲೀವ್ ಎಣ್ಣೆ ಸೇರಿಸಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ.