ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ಓರ್ವ ಪತ್ನಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿರುವುದೂ ಅಲ್ಲದೇ ಹಣ ತರದಿದ್ದರೆ ಅಕ್ಕನ ಮಗಳ ಜೊತೆ ಮತ್ತೊಂದು ಮದುವೆಯಾಗುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಟ್ನೆ ಪಿಸಿ ಆಗಿರುವ ಮಚ್ಚೇಂದ್ರ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ, ಬೆದರಿಕೆ ಆರೋಪ ಮಾಡಿದ್ದಾರೆ. ಮಚ್ಚೇಂದ್ರ ಹಾಗೂ ಆತನ ಕುಟುಂಬದವರು ನಿರಂತರವಾಗಿ ವರದಕ್ಷಿಣೆ ಹಣ ತರುವಂತೆ ಸತಾಯಿಸುತ್ತಿದ್ದು, ಹಣ ತರದಿದ್ದರೆ ಅಕ್ಕನ ಮಗಳನ್ನು ಮದುವೆಯಾಗುತ್ತೇನೆ ಎಂದು ಹೆದರಿಸುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಟಗುಪ್ಪ ಮೂಲದ ಮಚ್ಛೇಂದ್ರ 2022ರಲ್ಲಿ ಬೀದರ್ ಜಿಲ್ಲೆಯ ಔರಾದ್ ನ ಸೀಮಾ ಎಂಬುವವರನ್ನು ವಿವಾಹವಾಗಿದ್ದ. ಬೆಂಗಳೂರಿನ ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ಮಚ್ಚೇಂದ್ರ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ದಂಪತಿ ಚನ್ನಾಗಿಯೇ ಇದ್ದರು ಕೆಲ ದಿನಗಳ ಬಳಿಕ ಪತ್ನಿಯನ್ನು ತವರಿಗೆ ಕಳಿಸಿದ ಕಾನ್ಸ್ ಟೇಬಲ್ ಮತ್ತೆ ಕರೆತರಲು ಹೋಗಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ವರದಕ್ಷಿಣೆ ನೀಡಬೇಕು. ಹಣ ತರದಿದ್ದರೆ ಕರೆದುಕೊಂಡು ಬರಲ್ಲ. ಅಕ್ಕನ ಮಗಳನ್ನು ಮದುವೆಯಾಗುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನಂತೆ.

































