ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಉತ್ಸವ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗವು ಸಂಕಷ್ಟದಲ್ಲಿದೆ.ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಿಲು ಸರ್ಕಾರ ನಿರ್ಧರಿಸಿದೆ.ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಭಾರಿ ಸರಳ ದಸರಾ ಆಚರಿಸಲಿದೆ ಎಂದು ಹೇಳಿದ್ದಾರೆ.
ಕಳೆದ ಸೆ.15ರಂದು ವಿಶ್ವವಿಖ್ಯಾತ ಮೈಸೂರು ದಸರಾ-2023ರ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ ಅಕ್ಟೋಬರ್ 15 ಭಾನುವಾರರಂದು ಶರನ್ನವರಾತ್ರಿ ಪ್ರಾರಂಭವಾಗಲಿದ್ದು, ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆಯು ಬೆಳಗ್ಗೆ 10:15 ರಿಂದ ಬೆಳಗ್ಗೆ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಲಾಗುತ್ತದೆ. ನಂತರ ಅರಮನೆ ಪೂಜೆಗಳು ಸಂಜೆ 6:30 ರಿಂದ ಸಂಜೆ 7:15 ಗಂಟೆಗೆ ಶುಭಮೇಷ ಲಗ್ನದಲ್ಲಿ ಪೂಜೆ ಆರಂಭವಾಗಲಿದೆ.
ಅಕ್ಟೋಬರ್ 20 ರಂದು ಶುಕ್ರವಾರ ಕಾತ್ಯಾಯಿನಿ ಸರಸ್ವತಿ ಪೂಜೆ ನಡೆಯಲಿದ್ದು, ಅಕ್ಟೋಬರ್ 21 ರಂದು ಶನಿವಾರ ಕಾಲ ರಾತ್ರಿ ಮಹಿಷಾಸುರ ಸಂಹಾರ ಅಕ್ಟೋಬರ್ 23ರಂದು ಸೋಮವಾರ ಆಯುಧ ಪೂಜೆ ನೆರವೇರಲಿದೆ. ಅಕ್ಟೋಬರ್ 24 ರಂದು ಮಂಗಳವಾರ ವಿಜಯದಶಮಿ ಆಚರಿಸಲಾಗುತ್ತಿದೆ. ನಂತರ ಮಧ್ಯಾಹ್ನ 1: 46ರಿಂದ 2:08 ಗಂಟೆವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿಧ್ವಜ ಪೂಜೆ ನೆರವೇರಿಸಲಿದ್ದಾರೆ.
ಅದೇ ದಿನ ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ, ನಂತರ ಜಂಬೂ ಸವಾರಿ ಆರಂಭಗೊಳ್ಳಲಿದೆ. ಈ ಎಲ್ಲವನ್ನು ರಾಜ್ಯಾದ್ಯಂತ ಬರ ಇರುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಇದೀಗ ನಿರ್ಧರಿಸಿದ್ದು, ಈ ಬಾರಿ ದಸರಾ ಸೊಬಗು ಡಲ್ ಹೊಡೆಯೋದು ಗ್ಯಾರಂಟಿ..!!