ದಾವಣಗೆರೆ: ತುಂಗಭದ್ರಾ ನದಿ ನೀರು ಪರಿಶೀಲನೆ, ದಾವಣಗೆರೆ, ಹರಿಹರ ಜನರು ನಿರಾಳ; ಕಳೆದ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗದ ಕಾರಣ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮತ್ತು ಜಿಲ್ಲೆಯ ಬಹುತೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇದರ ಮೇಲೆಯೇ ಅವಲಂಬಿತವಾಗಿದ್ದು ಕುಡಿಯುವ ನೀರಿನ ಸಮಸ್ಯೆಯಾಗಿತ್ತು.
ನೀರಾವರಿ ನಿಗಮದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾರ್ಚ್ 29 ರಿಂದ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್‍ನಂತೆ ಭದ್ರಾ ನದಿಗೆ ನೀರು ಬಿಡಲಾಗುತ್ತಿದೆ. ಇದನ್ನು ಏಪ್ರಿಲ್ 5 ರ ವರೆಗೆ 3 ಸಾವಿರದಂತೆ ಮತ್ತು ಏ.6 ರ ಮಧ್ಯರಾತ್ರಿ ವರೆಗೆ 2200 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.
ತುಂಗಭದ್ರಾ ನದಿಯಲ್ಲಿನ ನೀರು ಹರಿಹರದಿಂದ ಮುಂದಕ್ಕೆ ಸಾಗಿದ್ದು ನದಿಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಎಂದು ಹರಿಹರ ಸಮೀಪದ ಜಾಕ್‍ವೆಲ್‍ಗೆ ಬುಧವಾರ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಇಳಿಕೆಯಾಗಿದ್ದು ದಾವಣಗೆರೆ ನಗರ ಸೇರಿದಂತೆ ಹರಿಹರ ನಗರಕ್ಕೆ 24*7 ಮಾದರಿಯಲ್ಲಿ ನೀರು ಪೂರೈಕೆಗೆ ಸಮಸ್ಯೆಯಾಗಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಲು ಸಿದ್ದತೆ ನಡೆಸಲಾಗಿತ್ತು. ತುಂಗಭದ್ರಾ ನದಿಗೆ ನೀರು ಬಂದಿದ್ದರಿಂದ ಸದ್ಯದ ಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ.