ನೀವು ನಿಮ್ಮ ಕೈ ಬೆರಳುಗಳ (hand fingers) ಉಗುರನ್ನು ಸೂಕ್ಷ್ಮವಾಗಿ ಗಮನಿಸಿ. ಉಗುರುಗಳ (nails) ಮೇಲೆ ಅರ್ಧ ಚಂದ್ರಾಕಾರದ ಆಕೃತಿಯನ್ನು ನೀವು ಕಾಣುತ್ತೀರಿ.
ಹೀಗೆ ನಮ್ಮ ಉಗುರಿನಲ್ಲಿ ಮೇಲೆ ಮೂಡಿದ ಈ ಅರ್ಧ ಚಂದ್ರಾಕೃತಿಯು (Crescent) ನಮ್ಮ ಆರೋಗ್ಯದ ಕುರಿತು ಅನೇಕ ಸೂಚನೆಗಳನ್ನು ನೀಡುತ್ತದೆ.
ನಮ್ಮ ಬೆರಳುಗಳಿಗೆ ರಕ್ಷಣೆ ನೀಡಲು ಉಗುರುಗಳು ಬೇಕೆಬೇಕು. ನಮ್ಮ ಬೆರಳುಗಳ ಸೂಕ್ಷ್ಮ ಚರ್ಮವನ್ನು (Sensitive skin) ಉಗುರು ರಕ್ಷಿಸುತ್ತದೆ. ಉಗುರುಗಳು ಒಬ್ಬರಿಗಿಂತ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತವೆ.
ಇನ್ನು ಉಗುರಿನಲ್ಲಿ ಮೂಡಿದ ಅರ್ಧ ಚಂದ್ರಾಕೃತಿಯು ಬಿಳಿ ಮತ್ತು ಸ್ಪಷ್ಟವಾಗಿದ್ದರೆ, ಆ ವ್ಯಕ್ತಿ ಸಂಪೂರ್ಣವಾಗಿ ಆರೋಗ್ಯವಂತರು ಎಂದು ಅರ್ಥ. ಅರ್ಧ ಚಂದ್ರಾಕೃತಿಯು ಸಾಮಾನ್ಯವಾಗಿ ಹೆಬ್ಬೆರಳಿನ (thumb) ಮೇಲೆ ಸ್ಪಷ್ಟವಾಗಿ ಕಾಣಿಸುತ್ತದೆ. ಇತರ ಬೆರಳುಗಳ ಮೇಲೆ ಅಷ್ಟು ಸ್ಪಷ್ಟವಾಗಿ (clearly) ಕಾಣಿಸುವುದಿಲ್ಲ. ಉಗುರಿನ ಮೇಲೆ ಹೀಗೆ ಕಾಣಿಸಿಕೊಳ್ಳುವ ಅರ್ಧ ಚಂದ್ರನನ್ನು ವಿಜ್ಞಾನದ ಭಾಷೆಯಲ್ಲಿ ಲುನುಲಾ (Lunula) ಎಂದು ಕರೆಯಲಾಗುತ್ತದೆ.
ಉಗುರುಗಳು ಚರ್ಮಗಳ ಚೀಲದೊಳಗಿನಿಂದ ಬೆಳೆಯುತ್ತವೆ. ಇದನ್ನು ಮ್ಯಾಟ್ರಿಕ್ಸ್ ಎಂದು ಕರೆಯುತ್ತಾರೆ. ಇವು ಹೊಸ ಕೋಶಗಳನ್ನು (new cells) ತಯಾರಿಸಲು ಸಹಾಯ ಮಾಡುತ್ತವೆ. ಬಳಿಕ ಅವುಗಳನ್ನು ಚರ್ಮದೊಟ್ಟಿಗೆ ತಳ್ಳಲಾಗುವುದು. ಲುನುಲಾ ಎನ್ನುವುದು ಮ್ಯಾಟ್ರಿಕ್ಸ್ ನ ಗೋಚರ ಭಾಗವನ್ನು (visible part) ಒಳಗೊಂಡಿದೆ. ಇದು ವ್ಯಕ್ತಿಯ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ (reflects) ಎಂಬುದು ತಜ್ಞರ ಅಭಿಪ್ರಾಯ.
ಅಕಸ್ಮಾತ್ ಯಾವ ವ್ಯಕ್ತಿಗೆ ಉಗುರುಗಳಲ್ಲಿ ಲುನುಲಾ ಕಂಡು ಬರದಿದ್ದರೆ ಅದು ಚಿಂತಿಸುವ ವಿಷಯ. ಯಾಕೆಂದರೆ ದೇಹದಲ್ಲಿ ರಕ್ತದ ಕೊರತೆ ಇದ್ದರೆ ಲುನುಲಾ ಉಗುರುಗಳಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ. ಇದಲ್ಲದೆ, ವ್ಯಕ್ತಿಯ ಉಗುರಿನಲ್ಲಿ ಕಂಡು ಬರುವ ಬಿಳಿ ಬಣ್ಣದ ಲುನುಲಾ, ನೀಲಿ ಅಥವಾ ಹಳದಿ ಬಣ್ಣದಂತೆ ಕಾಣುತ್ತಿದ್ದರೆ ಆ ವ್ಯಕ್ತಿಗೆ ಮಧುಮೇಹ ರೋಗ (Diabetes) ಉಂಟಾಗುತ್ತದೆ. ಲುನುಲಾದ ಬಣ್ಣವು ಕೆಂಪು ಬಣ್ಣದಲ್ಲಿ ಕಂಡುಬಂದರೆ ಆ ವ್ಯಕ್ತಿಗೆ ಹೃದಯ ಸಂಬಂಧಿತ ಸಮಸ್ಯೆಗಳಿರುತ್ತವೆಯಂತೆ.