ಶ್ರೀನಗರ: ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಸೇರಿ ಆರು ಜನ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಬಂಧಿಸಿದೆ.
ಬಾರಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರು ಹಾಗೂ ಮತ್ತವರ ಬೆಂಬಲಿಗರ ಜಾಲದ ವಿರುದ್ಧ ಸೇನೆ ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಪಿಸ್ತೂಲ್‍ಗಳು ಮತ್ತು ಐದು ಹ್ಯಾಂಡ್ ಗ್ರೆನೇಡ್‍ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಸಕ್ರಿಯ ಭಯೋತ್ಪಾದಕ ಯಾಸಿರ್ ಅಹ್ಮದ್ ಶಾ ಕೂಡ ಸೇರಿದ್ದಾನೆ. ಬಾಲಾಪರಾಧಿ ಸೇರಿದಂತೆ ಇತರ ಐವರು ಆತನ ಸಹಚರರಾಗಿದ್ದಾರೆ. ಮಹಿಳೆಯರನ್ನು ಸಾಮಾನ್ಯವಾಗಿ ಅನುಮಾನಿಸದ ಕಾರಣ ಇಂತಹ ಚಟುವಟಿಕೆಗಳಿಗೆ ನೇಮಿಸಿಕೊಂಡಿದ್ದಾರೆ. ಈ ಬಂಧನವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಎಂಬ ಕಾರಣಕ್ಕೆ ಮೃದುವಾಗಿ ವರ್ತಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.