ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಐವರು ಐಎಎಫ್ ಅಧಿಕಾರಿಗಳ ಪೈಕಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ವಾಯುಪಡೆಯ ವಾಹನಗಳು ಪೂಂಚ್ನ ಸುರಾನ್ಕೋಟ್ ಪ್ರದೇಶದಿಂದ ಸನಾಯ್ ಕಡೆಗೆ ತೆರಳುತ್ತಿದ್ದಾಗ ನಾಲ್ವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡರು. ಅದರಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಪೈಕಿ ಒಬ್ಬ ಯೋಧ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭದಲ್ಲೇ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ವಾಯುಪಡೆಯ ಬೆಂಗಾವಲು ವಾಹನದ ಮೇಲೆ ಸುಮಾರು 30 ಸುತ್ತು ಗುಂಡು ಹಾರಿಸಿದ್ದರು. ದಾಳಿ ನಡೆದ ಸ್ಥಳವನ್ನು ಸುತ್ತುವರಿದು ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.