ಉಡುಪಿ: ಆರೋಪಿ ದಿಲೀಪ್ ಉಡುಪಿಯ ಲ್ಯಾಬ್‌ನಿಂದ ಆರ್ಸೆನಿಕ್ ಟ್ರೈ ಆಕ್ಸೈಡ್ ತರಿಸಿ ಬಾಲಕೃಷ್ಣ ಅವರ ಪತ್ನಿ ಪ್ರತಿಮಾಳಿಗೆ ನೀಡಿದ್ದ. ಪ್ರತಿಮಾ ನಿತ್ಯ ಆಹಾರದ ಜತೆ ಸ್ವಲ್ಪ ಸ್ವಲ್ಪವೇ ಪತಿಗೆ ನೀಡುತ್ತಿದ್ದಳು. ಇದರಿಂದಾಗಿ ಬಾಲಕೃಷ್ಣ ಅವರ ಅಂಗಾಂಗಗಳು ಸಂವೇದನೆ ಕಳೆದುಕೊಂಡು ಆಸ್ಪತ್ರೆ ಸೇರುವಂತಾಯಿತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ ಬಾಲಕೃಷ್ಣ ಅವರನ್ನು ಅ.19ರ ರಾತ್ರಿ ಮನೆಗೆ ಕರೆತರಲಾಗಿತ್ತು. ಆರೋಪಿಗಳಾದ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿಕೊಂಡು ಅದೇ ದಿನ ಮಧ್ಯರಾತ್ರಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ಲ್ಯಾಬ್ ಮಾಲಕರನ್ನು ಹಾಗೂ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಅದರ ಜತೆ ಆರೋಪಿ ಪ್ರತಿಮಾಳಿಂದ 2 ಮೊಬೈಲ್ ಹಾಗೂ ಮತ್ತೊಬ್ಬ ಆರೋಪಿ ದಿಲೀಪ್ ಹೆಗ್ಡೆಯಿಂದ 1 ಮೊಬೈಲ್ ಮತ್ತು 2 ಸಿಮ್ ಸೇರಿದಂತೆ ಒಟ್ಟು 4 ಮೊಬೈಲ್‌ಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.ಕೊಲೆ ಆರೋಪಿ ಪ್ರತಿಮ ಅಹಾರದಲ್ಲಿ ಸೇರಿಸಿದ್ದ ವಿಷ ಪದಾರ್ಥವು ಆರ್ಸೆನಿಕ್ ಟ್ರೈ ಆಕ್ಸೈಡ್ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರತಿಮಾಳು ವಿಷವನ್ನು ಪ್ರತೀನಿತ್ಯ ತನ್ನ ಪತಿಗೆ ಆಹಾರದ ಜತೆ ಮಿಶ್ರಣ ಮಾಡಿ ಕೊಟ್ಟ ಬಳಿಕ ಖಾಲಿಯಾದ ವಿಷದ ಬಾಟಲಿಯನ್ನು ಪ್ರಿಯಕರ ದಿಲೀಪ್ ಹೆಗ್ಡೆಗೆ ನೀಡಿದ್ದು, ಆತ ಕಾರ್ಕಳ ಕುಕ್ಕುಂದೂರಿನ ಅಯ್ಯಪ್ಪನಗರದ ಕುಕ್ಕುಂದೂರು-ಹಿರ್ಗಾನ ಸಂಪರ್ಕ ರಸ್ತೆಯ ಬಳಿ ಬಾಟಲಿ ಎಸೆದಿರುವುದಾಗಿ ಪೊಲೀಸರಲ್ಲಿ ಬಾಯ್ಬಿಟ್ಟಿದ್ದ. ಆದರೆ ಅ. 27ರಂದು ಪೊಲೀಸರು ಬಾಟಲಿ ಪತ್ತೆಗಾಗಿ ಆರೋಪಿಯನ್ನು ಆ ಸ್ಥಳಕ್ಕೆ ಕರೆದೊಯ್ದು ಹುಡುಕಿದಾಗ ಅಲ್ಲಿ ಯಾವುದೇ ಬಾಟಲಿ ಪತ್ತೆಯಾಗಿಲ್ಲ.
ಹಬ್ಬ ಎಂದರೆ ಜತೆಗೂಡಿ ಪಾಯಸದ ಊಟ ಮಾಡುವುದು ಕ್ರಮ. ಆದರೆ ಇಲ್ಲಿ ಪತ್ನಿಯೇ ತಾಳಿ ಕಟ್ಟಿದ ಪತಿಗೆ ವಿಷ ನೀಡಿರುವುದು ವಿಪರ್ಯಾಸವೇ ಸರಿ. ಪತಿ ಬಾಲಕೃಷ್ಣ ಅವರನ್ನು ಮುಗಿಸಲು ವ್ಯವಸ್ಥಿತ ಷಡ್ಯಂತ್ರ ಹೆಣೆದಿದ್ದ ಪ್ರತಿಮಾ ಚೌತಿಯ ದಿನ ಹಬ್ಬದ ಊಟದಲ್ಲಿ ಪತಿಗೆ ಮೊದಲು ವಿಷ ಬೆರೆಸಿ ಕೊಟ್ಟಿದ್ದಳು. ಆ ದಿನ ಅವರು ವಾಂತಿ ಮಾಡಿದ್ದು ಅನಂತರ ಸ್ವಲ್ಪ ಸ್ವಲ್ಪವೇ ವಿಷ ನೀಡಿದ್ದರಿಂದ ಅವರ ಆರೋಗ್ಯ ಬಿಗಡಾಯಿಸುತ್ತ ಸಾಗಿತ್ತು. ಅದರ ನಡುವೆ ಜ್ವರ ಕೂಡ ಬಂದಿತ್ತು.
ಆರೋಪಿ ಪ್ರತಿಮಾಳ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಇಂದು (ಅ.28) ಬೆಳಗ್ಗೆ ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ. ಆತನನ್ನು ಮೂರು ದಿನ ಪೊಲೀಸರ ಕಸ್ಟಡಿಗೆ ನೀಡಲಾಗಿತ್ತು. ವಿಷದ ಬಾಟಲಿ ಸಹಿತ ಇನ್ನೂ ಕೆಲ ಸೊತ್ತುಗಳನ್ನು ವಶಕ್ಕೆ ಪಡೆಯಬೇಕಾಗಿರುವ ಕಾರಣ ಆರೋಪಿಯನ್ನು ಮತ್ತಷ್ಟು ದಿನ ಪೊಲೀಸರು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇನ್ನೊಂದು ಹಂತದಲ್ಲಿ ದಿಲೀಪ್‌ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಹಿರಿಯಡಕ ಸಬ್‌ಜೈಲಿನಲ್ಲಿರುವ ಆರೋಪಿ ಪ್ರತಿಮಾಳನ್ನು ಪೊಲೀಸರು ಕಸ್ಟಡಿಗೆ ಕೇಳುವ ಪ್ರಕ್ರಿಯೆಯನ್ನು ನಡೆಸಬಹುದು. ಅನಂತರ ಇಬ್ಬರನ್ನೂ ಒಟ್ಟಿಗೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಾಗಿದೆ.
ಆರ್ಸೆನಿಕ್ ಟ್ರೈ ಆಕ್ಸೈಡ್ ಎಂದರೇನು?
ಆರ್ಸೆನಿಕ್ ಟ್ರೈ ಆಕ್ಸೈಡ್ ರಾಸಾಯನಿಕ ಪದಾರ್ಥ ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತು ಎನ್ನಲಾಗಿದ್ದು, ಇದನ್ನು ಹೆಚ್ಚಾಗಿ ಶಾಲಾ ಕಾಲೇಜುಗಳ ಲ್ಯಾಬ್‌ಗಳಲ್ಲಿ ಬಳಸಲಾಗುತ್ತದೆ. ಬಿಳಿ ಅಥವಾ ಹಳದಿ ಬಣ್ಣದ ಪುಡಿಯಾಗಿದ್ದು, ವಾಸನೆಯಿಲ್ಲ. ಈ ವಿಷಕಾರಿ ಪದಾರ್ಥ ನೀರು, ಎಥೆನಾಲ್ ಮತ್ತು ಇತರ ಸಾವಯವ ದ್ರಾವಕಗಳಲ್ಲಿ ಕರಗುತ್ತದೆ.