ಉಡುಪಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಪೊಲೀಸರೇ ಗೂಂಡಾ ರೀತಿ ವರ್ತನೆ ಮಾಡಿದರೆ ಅದು ವ್ಯವಸ್ಥೆಗೆ ಮಾರಕ. ರಾಜ್ಯ ಸರ್ಕಾರದ ಈ ಕ್ರಮ ಸರಿಯಲ್ಲ. ಜನರಿಗೆ ರಕ್ಷಣೆ ಕೊಡುವುದು, ವಿಶ್ವಾಸ ನಿರ್ಮಾಣ ಮಾಡುವುದು ಪೊಲೀಸರ ಜವಾಬ್ದಾರಿ ಎಂದು ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಳ್ತಂಗಡಿಯಲ್ಲಿ ಕಾನೂನು ಉಲ್ಲಂಘಿಸುವಂತಹ ಯಾವುದೇ ಘಟನೆ ನಡೆದಿರಲಿಲ್ಲ. ವಿನಾಕಾರಣ ರಾಜಕೀಯ ದ್ವೇಷದಿಂದ ಬಂಧನಕ್ಕೆ ಮುಂದಾಗಿದ್ದಾರೆ. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಮುಂದಿನ ವಾರ ಗೃಹ ಸಚಿವರನ್ನು ಭೇಟಿ ಮಾಡುತ್ತೇವೆ. ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವರಿಂದ ಸ್ಪಷ್ಟನೆ ಕೇಳುತ್ತೇವೆ. ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಒಬ್ಬ ಶಾಸಕನನ್ನು ಬೆದರಿಸುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಮಟ್ಟ ಹಾಕುವ ಹುನ್ನಾರ ಇದಾಗಿದೆ ಎಂದು ಹೇಳಿದ್ದಾರೆ