ಉಡುಪಿ: ಜಿಲ್ಲೆಯ ವಿವಿಧೆಡೆ ಕಳೆದ 4 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಗದ್ದೆಗಳಿಗೆ ನೀರು ನುಗ್ಗಿ ತೀವ್ರ ಬೆಳೆ ಹಾನಿಯಾಗಿದೆ. ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಕಲಿಯಾಲು ಎಂಬಲ್ಲಿ ಫಸಲು ಇದ್ದ ಗದ್ದೆಗೆ ನೀರು ತುಂಬಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.
ಮರ್ಕೋಡಿ ಹೊಳೆ, ಬಾಲಟ, ಕೋಲ್ಯಾ ನದಿಗಳು ಪಾಂಗಾಳ ಹೊಳೆಗೆ ಹೊಂದಿಕೊಂಡಿದ್ದು, ಭೀಕರ ಮಳೆಗೆ ತುಂಬಿ ಹರಿಯುತ್ತಿದೆ. ಈ ಹಿನ್ನಲೆ ಸ್ಥಳೀಯ ಪ್ರಧೇಶಗಳು ಜಲಾವೃತಗೊಂಡಿದ್ದು ನಾಗರೀಕರು ಭಯಭೀತರಾಗಿದ್ದಾರೆ.