ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಏರಿಕೆಯಾಗುತ್ತಲೇ ಇದೆ. ಇದೀಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಸಾವು ಪ್ರಕರಣ ದಾಖಲಾಗಿದೆ.
ಮಂಗನ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ಸಿದ್ದಾಪುರದ ಜಿಡ್ಡಿ ಗ್ರಾಮದ 65 ವರ್ಷದ ಮಹಿಳೆ ಸಾವನ್ನಪ್ಪಿರುತ್ತಾರೆ. ಇನ್ನು ಈವರೆಗೆ ಜಿಲ್ಲೆಯಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿರುತ್ತವೆ. ಆದರೆ ದಾಖಲಾದ ಎಲ್ಲಾ ಪ್ರಕರಣಗಳು ಸಿದ್ಧಾಪುರ ತಾಲೂಕಿನದ್ದು ಎಂಬುದು ಆಘಾತಕಾರಿ ಸಂಗತಿಯಾಗಿದೆ.
ಇನ್ನು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಂಗನ ಕಾಯಿಲೆಗೆ ಸೂಕ್ತ ಲಸಿಕೆ ಇಲ್ಲದೆ ಆರೋಗ್ಯ ಸಿಬ್ಬಂದಿಗಳು ಆತಂಕದಲ್ಲೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ಜನವರಿ ಕೊನೆಯ ವಾರ ಹಾಗೂ ಫೆಬ್ರವರಿ ಮೊದಲ ವಾರದ ಮಧ್ಯೆ ಸುಮಾರು 37 ಮಂದಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಇವರಲ್ಲಿ 6 ಮಂದಿ ತಾಲೂಕು ಆಸ್ಪತ್ರೆಯಲ್ಲಿ ಹಾಗೂ 6 ಮಂದಿಯನ್ನು ಮಂಗಳೂರು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.