ಉತ್ತರ ಕನ್ನಡ:ಉತ್ತರ ಕನ್ನಡಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿ ಹೆಚ್ಚಿದೆ. ಒಂದೇ ದಿನದಲ್ಲಿ 8 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ.
ಸಿದ್ದಾಪುರ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 7 ಪ್ರಕರಣಗಳು ಬೆಳಕಿಗೆ ಬಂದಿದೆ. ಕೇವಲ 10 ದಿನದಲ್ಲಿ ಇದರ ಸಂಖ್ಯೆ 16 ಕ್ಕೇರಿದೆ. ಇದರಲ್ಲಿ 10 ವರ್ಷದ ಓರ್ವ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೆಲವು ವರ್ಷಗಳಿಂದ ಮಂಗನ ಕಾಯಿಲೆ ಪತ್ತೆ ಆಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಬೇಕಿರುವ ಲಸಿಕೆ ಬಗ್ಗೆಯೂ ಇಲಾಖೆ ಸುಮ್ಮನಾಗಿದೆ. ಹೀಗಾಗಿ ಇದೀಗ ಮಂಗನ ಕಾಯಿಲೆ ರೋಗ ಪತ್ತೆಯಾಗಿದ್ದು, ಇದು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಮಂಗನ ಕಾಯಿಲೆ ಆತಂಕ ಕಾಡುತ್ತಿದೆ.
ಕಳೆದ ಐದು ವರ್ಷದಲ್ಲಿ ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು, 8 ಜನ ಈ ಕಾಯಿಲೆಯಿಂದ ಮೃತರಾಗಿದ್ದರು. ಇದೀಗ ಶಿವಮೊಗ್ಗ ಜಿಲ್ಲೆಯ ಗಡಿಯನ್ನು ಹೊಂದುಕೊಂಡಿರುವ ಸಿದ್ದಾಪುರದ ಕೊರ್ಲಕೈ, ಬಿಳಗಿ ಗ್ರಾಮದ ಒಟ್ಟು 7 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡರೇ ಹಲವು ಜನರಲ್ಲಿ ಈ ಸೊಂಕಿನ ಲಕ್ಷಣ ಕಂಡುಬಂದಿದೆ. ಇನ್ನು ಈ ಭಾಗದ ಜನರ ರಕ್ತ ಮಾದರಿ ಸಹ ಪಡೆಯಲಾಗುತ್ತಿದ್ದು, ಈ ಭಾಗದಲ್ಲಿ ಎರಡು ಮಂಗಗಳು ಸಾವನ್ನಪ್ಪಿದೆ.ಹೀಗಾಗಿ ತಕ್ಷಣ ಸರ್ಕಾರ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ.