ಲಕ್ನೋ: ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಸೋಲು ಕಾಣಲಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಹೇಳಿದ್ದಾರೆ. ಪ್ರತಾಪಗಢ ಕ್ಷೇತ್ರದಲ್ಲಿ ನಡೆದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, “ದೇಶದ 140 ಕೋಟಿಗೂ ಹೆಚ್ಚು ಜನರು ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿಪಕ್ಷಗಳಿಗೆ 400 ಸ್ಥಾನಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಾರೆ. ಉಳಿದ 143 ಸ್ಥಾನಗಳು ಅವರಿಗೆ ಕಷ್ಟಕರವಾಗುವುದನ್ನು ಖಚಿತಪಡಿಸಲಿದ್ದಾರೆ. ಕ್ಯೋಟೋ ವಾಲೆ ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ” ಎಂದರು. ಆಡಳಿತ ಪಕ್ಷದ ವಿರುದ್ಧ ಜನರ ಆಕ್ರೋಶ ಏರುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆಯಲಿರುವ 7ನೇ ಹಂತದ ಮತದಾನದ ವೇಳೆಗೆ ಅದು ವಿಪರೀತಗೊಳ್ಳಲಿದೆ. ಬಿಜೆಪಿಯು ‘ಕ್ಯೊಟೊ’ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲೂ ಸೋಲಲಿದೆ ಎಂದು ಈ ಹಿಂದೆ ಹೇಳಿದ್ದೆ. ಆದರೆ, ಆ ಕ್ಷೇತ್ರವೂ ಅವರ ಕೈಜಾರುವಂತೆ ಕಾಣುತ್ತಿದೆ. ಕೇಸರಿ ಪಕ್ಷವು ಉತ್ತರ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲಿನ ರುಚಿ ನೋಡಲಿದೆ ಎಂದು ಭವಿಷ್ಯ ನುಡಿದರು. ವಾರಾಣಸಿಯನ್ನು ಜಪಾನ್‌ನ ಸುಂದರ ನಗರ ಕ್ಯೊಟೊ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಹೀಗಾಗಿ ಯಾದವ್ ಅವರು, ವಾರಾಣಸಿಯನ್ನು ಕ್ಯೊಟೊ ಎಂದು ಉಲ್ಲೇಖಿಸಿದ್ದಾರೆ.