ಲಕ್ನೋ: ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಭೀಕರ ರೈಲು ದುರಂತ ನಡೆದಿದೆ.ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಹಲವು ಕೋಚ್‌ಗಳು ಹಳಿ ತಪ್ಪಿದ್ದರಿಂದ ರೈಲು ಅಪಘಾತಕ್ಕೀಡಾಗಿದ್ದು ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಗೋಂಡಾದಲ್ಲಿ ನಡೆದಿದೆ.
ಬುಧವಾರ ರಾತ್ರಿ 11.35ಕ್ಕೆ ಚಂಡೀಗಢ ನಿಲ್ದಾಣದಿಂದ ಹೊರಟಿದ್ದ ರೈಲು (ರೈಲು ಸಂಖ್ಯೆ 15904) ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು. ಮಾರ್ಗಮಧ್ಯೆ ಹಲವು ಕೋಚ್‌ಗಳು ಹಳಿ ತಪ್ಪಿದ ಪರಿಣಾಮ ದುರಂತರ ಸಂಭವಿಸಿದೆ. ಗೋಂಡಾ ಮತ್ತು ಜಿಲಾಹಿ ನಡುವಿನ ಪಿಕೌರಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನೆ ಸಂಭವಿಸಿದ ಸ್ಥಳಕ್ಕೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ದೌಡಾಯಿಸಿವೆ. ಅಲ್ಲದೇ 15 ಅಂಬುಲೆನ್ಸ್‌ಗಳೊಂದಿಗೆ 40 ಸದಸ್ಯರ ವೈದ್ಯಕೀಯ ತಂಡ ಸ್ಥಳಕ್ಕೆ ಬಂದಿದ್ದು, ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ.
ಘಟನೆ ಸಂಭವಿಸಿದ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಕ್ಕಾಗಮಿಸಿದ್ದಾರೆ. ಜೊತೆಗೆ ಪರಿಹಾರ ಕ್ರಮಗಳನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಮೃತರಿಗೆ ಸಂತಾಪ ಸೂಚಿಸಿದ್ದಾರೆ.ರೈಲು ಅಪಘಾತ ಸಂಭವಿಸಿದ ಕಾರಣ ಇದೇ ಮಾರ್ಗವಾಗಿ ತೆರಳಬೇಕಿದ್ದ 2 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ, 11 ರೈಲುಗಳಿಗೆ ಮಾರ್ಗ ಬದಲಾವಣೆಗೆ ಸೂಚಿಸಲಾಗಿದೆ. ಜೊತೆಗೆ ಪ್ರಯಾಣಿಕರಿಗಾಗಿ ಸಹಾಯವಾಣಿ ಸಹ ಸ್ಥಾಪಿಸಲಾಗಿದೆ.