ಬೆಂಗಳೂರು: ಬಿ. ರವಿ ಪಿಳ್ಳೈ ದುಬೈ ಮೂಲದ ಭಾರತೀಯ ಬಿಲಿಯನೇರ್ ಉದ್ಯಮಿ. ಅವರು ಆರ್‌ಪಿ ಗ್ರೂಪ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ. ಅವರ ಸಂಸ್ಥೆಗಳಲ್ಲಿ 70,000 ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಮೇ 2023 ರಲ್ಲಿ, ಅವರ ನಿವ್ವಳ ಮೌಲ್ಯವು US$ 3.1 ಶತಕೋಟಿ ಎಂದು ಅಂದಾಜಿಸಲಾಗಿದೆ.
ರವಿ ಪಿಳ್ಳೈ ಹುಟ್ಟು ಶ್ರೀಮಂತರಲ್ಲ, ಬಡ ಕುಟುಂಬದಲ್ಲಿ ಕೃಷಿಕನ ಮಗನಾಗಿ ಹುಟ್ಟಿದ ಪಿಳ್ಳೈ ಅವರು ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿ ಆರ್‌ಪಿ ಗ್ರೂಪ್ ಮೂಲಕ, ನಿರ್ಮಾಣ ಕ್ಷೇತ್ರದಲ್ಲಿ ಬಹು ಶತಕೋಟಿ ಡಾಲರ್ ನ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಉನ್ನತ ಸ್ಥಾನಕ್ಕೇರಿದ್ದಾರೆ.
ರವಿ ಪಿಳ್ಳೈ ಅವರು 2 ಸೆಪ್ಟೆಂಬರ್ 1953 ರಂದು ಕೇರಳದ ಕೊಲ್ಲಂನ ಕರಾವಳಿ ಭಾಗದ ಹಳ್ಳಿಯೊಂದಕ್ಕೆ ಸೇರಿದವರಾಗಿದ್ದು, ಸಣ್ಣ ಕೃಷಿ ಕುಟುಂಬವೊಂದರಲ್ಲಿ ಜನಿಸಿದ್ದರು. ವ್ಯವಸಾಯ ನಂಬಿಕೊಂಡಿದ್ದ ವರ್ಷಾಂತ್ಯದಲ್ಲಿ ಮನೆಯಲ್ಲಿ ಖರ್ಚಿಗೂ ಹಣವಿರಲಿಲ್ಲ. ರವಿ ಪಿಳ್ಳೈ ಅವರು ಅಂದೇ ವಾಣಿಜ್ಯೋದ್ಯಮಿಯಾಗಿ ಹಲವರಿಗೆ ಕೆಲಸ ಕೊಡಬೇಕು ಎಂದು ನಿರ್ಧರಿಸಿದ್ದರು. ಇದಕ್ಕಾಗಿ ಶ್ರಮ ಪಟ್ಟು ಓದತೊಡಗಿದರು.
ಜೀವನದಲ್ಲಿ ಅದೇನೆ ತೊಂದರೆಗಳಿದ್ದರೂ ಶಿಕ್ಷಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಕೊಚ್ಚಿ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಸಾಲ ಪಡೆದು ರೂ 100,000 ನೊಂದಿಗೆ ಚಿಟ್-ಫಂಡ್ ಕಂಪೆನಿಯನ್ನು ಸ್ಥಾಪಿಸುವ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಂದ ಲಾಭವನ್ನು ಅದೇ ಕಂಪನಿಗೆ ಹೂಡಿಕೆ ಮಾಡಿದರು. ಆದರೂ ಅವರ ಈ ವ್ಯವಹಾರ ಅಷ್ಟೊಂದು ಯಶಸ್ವಿ ಕಾಣಲಿಲ್ಲ.
ಇದಾದ ಬಳಿಕ ಕಟ್ಟಡ ಗುತ್ತಿಗೆ ವ್ಯವಹಾರ ಮತ್ತು ಕೇರಳದ ಕೆಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳಾದ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ , ಹಿಂದೂಸ್ತಾನ್ ನ್ಯೂಸ್‌ಪ್ರಿಂಟ್ ಲಿಮಿಟೆಡ್ , ಮತ್ತು ಕೊಚ್ಚಿನ್ ರಿಫೈನರೀಸ್‌ಗಳಲ್ಲಿ ಕೆಲಸ ಮಾಡಿದರು. ಸ್ಥಳೀಯರು ಮುಷ್ಕರ ಮಾಡಿದ ಪರಿಣಾಮ ಅವರು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಬೇಕಾಗಿ ಬಂತು. ಮುಷ್ಕರವೇ ಟರ್ನಿಂಗ್ ಪಾಯಿಂಟ್.
ಛಲ ಬಿಡದೇ 1978ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಲು ನಿರ್ಧರಿಸಿದ್ದರು. ಅಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿ ಉದ್ಯಮಿಯಾಗಬೇಕೆಂಬ ತುಡಿತದಿಂದ ತಮಲ್ಲಿದ್ದ ಹಣ ವಿನಿಯೋಗಿಸಿ ಸ್ವಂತ ಕಂಪನಿಯೊಂದನ್ನು ಆರಂಭಿಸಿದರು. ಆರಂಭದಲ್ಲಿ 150 ಜನರೊಂದಿಗೆ ನಿರ್ಮಾಣ ಕಂಪೆನಿಯೊಂದನ್ನು ಸ್ಥಾಪಿಸಿದರು. ಹೀಗೆ ಅವರು ಹಿಂತಿರುಗಿ ನೋಡದೇ ವ್ಯವಹಾರವನ್ನು ವಿಸ್ತರಿಸುತ್ತಾ ಹೋದರು. ಈಗ ಅವರ ಬಳಿಯಿರುವ ಕೆಲಸಗಾರರ ಸಂಖ್ಯೆಯು 70,000ಕ್ಕೆ ಏರಿದ್ದು, ಅವರ ಉದ್ಯಮವೂ ಎತ್ತರಕ್ಕೆ ಕ್ಷಿಪ್ರವಾಗಿ ಬೆಳೆದು ನಿಂತಿದೆ.
ಮಧ್ಯ ಪ್ರಾಚ್ಯದಲ್ಲಿ ಅವರ ಆರ್ಪಿ ಗ್ರೂಪ್ ಭಾರತೀಯ ಕಾರ್ಮಿಕರನ್ನು ಹೊಂದಿರುವ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ. ಅವರ ಈ ಯಶಸ್ವಿಗೆ ಭಾರತ ಸರ್ಕಾರದಿಂದ 2008ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಹಾಗೂ 2010ರಲ್ಲಿ ಪದ್ಮಶ್ರೀ ಗೌರವ ಲಭಿಸಿದೆ. ಅವರಿಗೆ ನ್ಯೂಯಾರ್ಕ್ನ ಎಕ್ಸೆಲ್ಸಿಯರ್ ಕಾಲೇಜಿನಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಆಸ್ತಿ ಮೌಲ್ಯ 25,000 ಕೋಟಿ ರೂ.($3.1 ಬಿಲಿಯನ್).