ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ ಬಿಹಾರದ ಪ್ರಸ್ತುತ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ನವದೆಹಲಿಯ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ರೂಸ್ ಅವೆನ್ಯೂ ಕೋರ್ಟ್ 50,000 ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದೆ. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಯಾದವ್ ಕುಟುಂಬ ಸೇರಿದಂತೆ ಒಟ್ಟು 17 ಆರೋಪಿಗಳು ಹಾಜರಿದ್ದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಅ.16ರಂದು ನಿಗದಿಪಡಿಸಿದೆ.
ಇದಕ್ಕೂ ಮುನ್ನ ಪ್ರಕರಣದ ತನಿಖೆ ನಡೆಸಿದ ಸಿಬಿಐ, ರೋಸ್ ಅವೆನ್ಯೂ ಕೋರ್ಟ್‌ಗೆ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. ಅಕ್ಟೋಬರ್ 4 ರಂದು ಹಾಜರಾಗುವಂತೆ ನ್ಯಾಯಾಲಯ ತಿಳಿಸಿತ್ತು.
ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ‘ಉದ್ಯೋಗಕ್ಕಾಗಿ ಭೂಮಿ’ ಹಗರಣ ಇದಾಗಿದೆ. ಕಳೆದ ಮಾರ್ಚ್ 2023ರಲ್ಲಿ ಈ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿತ್ತು. ಜೊತೆಗೆ ‘ಉದ್ಯೋಗಕ್ಕಾಗಿ ಭೂಮಿ’ ಹಗರಣದ ವೇಳೆ 200 ಕೋಟಿ ರು. ಮೌಲ್ಯದ ಜಮೀನನ್ನು ಅವರು ಪಡೆದುಕೊಂಡಿದ್ದರು. ಇದು ಸೇರಿ ಸುಮಾರು 600 ಕೋಟಿ ರು. ಮೌಲ್ಯದ ಅಕ್ರಮ ಪತ್ತೆಯಾಗಿದೆ ಎಂದು ಹೇಳಿತ್ತು.
ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಯಾದವ್ ಕುಟುಂಬದ ಸದಸ್ಯರು ಅಥವಾ ಸಹಚರರು ಭೂಮಿಯನ್ನು ಲಂಚದ ರೂಪದಲ್ಲಿ ಪುಕ್ಕಟೆಯಾಗಿ ಅಥವಾ ಕಡಿಮೆ ಬೆಲೆಗೆ ಪಡೆದಿರುವ ಆರೋಪವಿದ್ದು ಉದ್ಯೋಗಕ್ಕಾಗಿ ಭೂಮಿ ಹಗರಣ ಎನ್ನಲಾಗುತ್ತದೆ.