ಬೆಂಗಳೂರು: ರಾಜ್ಯದ ಖಾಸಗಿ ವಲಯದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡಾ 75ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವಿತ ವಿಧೇಯಕವನ್ನು ರಾಜ್ಯ ಸಂಪುಟವು ಅಂಗೀಕರಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಈ ಮಸೂದೆಯು ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳು ನಿರ್ವಹಣಾ ವಿಭಾಗಗಳಲ್ಲಿ 50% ಮತ್ತು ನಿರ್ವಹಣೆಯೇತರ ವಿಭಾಗಗಳಲ್ಲಿ 75% ಸ್ಥಳೀಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ. ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ 2024 ರ ನಿಬಂಧನೆಗಳನ್ನು ಉಲ್ಲಂಘಿಸಿದರೆ 25,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಪ್ರಸ್ತಾವಿತ ಮೀಸಲಾತಿ ವಿಧೇಯಕದಲ್ಲಿರುವ ಅಂಶಗಳೇನು? ಪ್ರಸ್ತಾವಿತ ವಿಧೇಯಕದ ‘ಸ್ಥಳೀಯ ಅಭ್ಯರ್ಥಿ’ ಎಂದರೆ ಕರ್ನಾಟಕದಲ್ಲಿ ಹುಟ್ಟಿ, 15 ವರ್ಷಗಳ ಕಾಲ ಇಲ್ಲಿಯೇ ನೆಲೆಸಿರುವ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ, ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ. ಪ್ರಸ್ತಾವಿತ ವಿಧೇಯಕವು, “ಯಾವುದೇ ಉದ್ಯಮ, ಕಾರ್ಖಾನೆ ಅಥವಾ ಇತರ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇಕಡಾ 50ರಷ್ಟು ಆಡಳಿತ ವಿಭಾಗಗಳಲ್ಲಿ ಮತ್ತು ಶೇಕಡಾ 70ರಷ್ಟು ಆಡಳಿತವಲ್ಲದ ವಿಭಾಗಗಳಲ್ಲಿ ನೇಮಿಸಿಕೊಳ್ಳಬೇಕು. ಮಾಧ್ಯಮಿಕ ಶಾಲಾ ಹಂತದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿತಿರಬೇಕು. ಈ ಪ್ರಮಾಣಪತ್ರ ಹೊಂದಿರದ ಅಭ್ಯರ್ಥಿಗಳು ‘ನೋಡಲ್ ಏಜೆನ್ಸಿ’ ನಿಗದಿ ಮಾಡಿದ ಕನ್ನಡ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕೈಗಾರಿಕೆಗಳು ಮತ್ತು ಸಂಸ್ಥೆಗಳಿಗೆ ನೇಮಕವಾಗಲು ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಸರ್ಕಾರದ ಸಹಯೋಗದೊಂದಿಗೆ ಮೂರು ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಬೇಕು. ಅರ್ಹ ಸ್ಥಳೀಯ ಅಭ್ಯರ್ಥಿಗಳು ಸಿಗದೇ ಹೋದ ಸಂದರ್ಭದಲ್ಲಿ ಸರ್ಕಾರಕ್ಕೆ ಮೀಸಲಾತಿ ಸಡಿಲಿಕೆ ಅರ್ಜಿಯನ್ನು ಸಲ್ಲಿಸಬೇಕು. ಈ ವಿನಾಯಿತಿಯು ಆಡಳಿತ ವಿಭಾಗದಲ್ಲಿ ಶೇಕಡಾ 25ಕ್ಕಿಂತ, ಇತರ ವಿಭಾಗಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಇರಬಾರದು ಎಂಬುದನ್ನು ಪ್ರಸ್ತಾವಿತ ವಿಧೇಯಕದಲ್ಲಿ ಕಡ್ಡಾಯ ಮಾಡಿದೆ. ಈ ಕಾಯಿದೆಯಡಿ ನೋಡಲ್ ಏಜೆನ್ಸಿಯನ್ನು ಸಹ ಸ್ಥಾಪಿಸಲಾಗುವುದು. ಇದು ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವ ಸ್ಥಳೀಯರ ಮೇಲೆ ನಿಗಾ ವಹಿಸುತ್ತದೆ. ಸರ್ಕಾರಕ್ಕೆ ಕಾಲಕಾಲಕ್ಕೆ ವರದಿಯನ್ನೂ ಸಲ್ಲಿಸಲಿದೆ. ಸ್ಥಳೀಯ ಎಂದರೆ ಯಾರು?: ಸ್ಥಳೀಯ ಅಭ್ಯರ್ಥಿ ಎಂದರೆ, ವಿಧೇಯಕದ ಕರಡಿನಲ್ಲಿ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಹುಟ್ಟಿ 15 ವರ್ಷಗಳಿಂದ ವಾಸಿಸಿದ್ದ ವ್ಯಕ್ತಿಯಾಗಿರಬೇಕು. ಆತನಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಸ್ಪಷ್ಟವಾಗಿ ಮಾತನಾಡಲು ಬರಬೇಕು. ಮಾಧ್ಯಮಿಕ ಅಂದರೆ, 8ರಿಂದ 10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಇಲ್ಲವಾದಲ್ಲಿ, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪ್ರಾವೀಣ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು. ಫೆಬ್ರವರಿಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ನೋಟಿಸ್ ಬೋರ್ಡ್ ಗಳಲ್ಲಿ ಕೆಲಸ ಮಾಡುವ ಕನ್ನಡಿಗರ ಸಂಖ್ಯೆಯನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ವಿಧಾನಸಭೆಗೆ ತಿಳಿಸಿದ್ದರು.