ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕ ಮಂಡಿಸಿ ಕೆಲಹೊತ್ತಿನಲ್ಲೇ ತಾತ್ಕಾಲಿಕ ತಡೆ ನೀಡಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ವಿಜಯೇಂದ್ರ, ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ? ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ. ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಲಾಗಿದೆ. ಸರ್ಕಾರದ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಖಂಡಿಸುವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ’ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು’ ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ.
ಮುಖ್ಯಮಂತ್ರಿಗಳು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮೂರು ಬಾರಿ ಯೂಟರ್ನ್ ಹೊಡೆದು ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕ ನಿರ್ಧಾರದ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ ಎಂದು ಕಿಡಿಕಾರಿದರು.