ಮಂಡ್ಯ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕುಮಾರಣ್ಣ ಮೊದಲ ದಿನವೇ ಅಮಾನತು ಮಾಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈವರೆಗೆ ಪ್ರಜ್ವಲ್ ನನ್ನ ಸಂಪರ್ಕಕ್ಕೂ ಬಂದಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟು ಕೂಲಂಕಷವಾಗಿ ತನಿಖೆ ನಡೆಸಲಿ. ಪೆನ್‌ಡ್ರೈವ್ ವಿಚಾರವಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆರೋಪ ಬಂದಾಗ ನಾವು ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ಈಗಾಗಲೇ ಈ ಸಂಬಂಧ ತನಿಖೆ ನಡೆಯಿತ್ತಿದೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ಯಾ? ಎಂಬ ಪ್ರಶ್ನೆ ಇದೆ. ಈ ಬಗ್ಗೆ ನಾವು ಈಗಾಗಲೇ ಸಭೆ ನಡೆಸಿದ್ಪ್ದೇವೆ ಎಂದಿದ್ದಾರೆ.
ವಿಡಿಯೋ ಮಾಡಿರೋದು ವಿಡಿಯೋ ಬಿಟ್ಟಿರೋದು ಎರಡು ತಪ್ಪು. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರದ ಅವರನ್ನು ಬೀದಿಗೆ ತಂದಿದೆ. ಪೆನ್‌ಡ್ರೈವ್ ಹಂಚಿರೋದು ಯಾರೆಂದು ಪತ್ತೆ ಮಾಡಬೇಕು. ಹೆಣ್ಣು ಮಕ್ಕಳನ್ನು ಬ್ಲರ್ ಮಾಡದೇ ವೀಡಿಯೋ ಹರಿ ಬಿಟ್ಟಿದ್ದಾರೆ. ಹೆಣ್ಣು ಮಕ್ಕಳ ಮರ್ಯಾದೆ ಏನ್ ಆಗುತ್ತೆ? ಅವರ ಕುಟುಂಬದ ಗತಿ ಏನು? ಅವರ ಜೀವಕ್ಕೆ ಅಪಾಯ ಬಂದರೆ ಯಾರು ಜವಾಬ್ದಾರಿ? ಎಂದು ಅವರು ಪ್ರಶ್ನಿಸಿದ್ದಾರೆ.