ಶಿವಮೊಗ್ಗ : ಉರುಳು ಹಾಕಿ ಪ್ರಾಣಿಗಳನ್ನು ಹತ್ಯೆಗೈಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವನ್ಯಜೀವಿ ವಿಭಾಗಗಳಲ್ಲಿ ಕಳೆದ 7 ತಿಂಗಳುಗಳಲ್ಲಿ 11 ಕರಡಿ ಮತ್ತು 4 ಚಿರತೆಗಳು ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಸಾವನಪ್ಪಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆನೆ ಕಂದಕಗಳ ಬಳಿ ಬೆಳೆದ ಹುಲ್ಲಿನ ನಡುವೆ ಉರುಳು ಅಳವಡಿಸಿ ಕಳ್ಳಬೇಟೆ ಪ್ರಯತ್ನ ನಡೆಯುತ್ತಿದೆ. ಇದರ ಜೊತೆಗೆ ಭದ್ರಾವತಿ, ಚಿಕ್ಕಮಗಳೂರು ಭಾಗದಲ್ಲೂ ಈ ರೀತಿಯ ಸಮಸ್ಯೆ ಇರುವ ಬಗ್ಗೆ ದೂರುಗಳು ಬಂದಿವೆ ಎಂದರು.
ಉರುಳು ಮತ್ತು ತಂತಿ ಬೇಲಿಗೆ ಅಕ್ರಮವಾಗಿ ಹರಿಸುವ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಸಾವಿಗೀಡಾಗುತ್ತಿವೆ. ಈ ಕುರಿತಂತೆ ಒಂದು ವಿಶೇಷ ತಂಡ ರಚಿಸಿ ಕಾಡಿನಂಚಿನ ಗ್ರಾಮದ ಜನರಿಗೆ ಜಾಗೃತಿ ಮೂಡಿಸಿ, ಉರುಳುಗಳನ್ನು ತೆರವು ಮಾಡಿಸಬೇಕು. ವನ್ಯಜೀವಿಗಳ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುಂತೆ ನಿರ್ದೇಶಿಸಿದ್ದಾರೆ.






























