ಊಟಿ ಅಕ್ಟೋಬರ್ 1:ಪ್ರವಾಸಿ ತಾಣ ಊಟಿ ಸಮೀಪದ ಕುನ್ನೂರ್ ಬಳಿ 55 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ ಘಟನೆ ನಡೆದಿದೆ.
ಬಸ್ ಊಟಿಯಿಂದ ಮೆಟ್ಟುಪಾಳ್ಯಂಗೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ವೇಳೆ ಬಸ್ ಕಮರಿಗೆ ಬಿದ್ದಿದೆ. ಸ್ಥಳೀಯರು, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದವರು ಸಂತ್ರಸ್ತರ ನೆರವಿಗೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಬಲಿಯಾದವರು ತೆಂಕಶಿ ಜಿಲ್ಲೆಯ ಕಡಯಂ ಮೂಲದವರಾಗಿದ್ದು, ಮನೆಗೆ ತೆರಳುತ್ತಿದ್ದರು.
ಗಾಯಾಳುಗಳನ್ನು ಕೂನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ನಗದು ಪರಿಹಾರ ಘೋಷಿಸಿದ್ದಾರೆ. ಅಪಘಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಂತ್ರಸ್ತರ ಸಂಬಂಧಿಕರಿಗೆ ಸಹಾನುಭೂತಿ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ.