ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಭರ್ಜರಿ ತಯಾರಿಯ ನಡುವೆ ಭಾರತ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಜಾರ್ಖಂಡ್ ಹೈಕೋರ್ಟ್ ನೋಟಿಸ್ ನೀಡಿದೆ.
ಇದೇ ವರ್ಷದ ಜನವರಿಯಲ್ಲಿ ಧೋನಿ ತಮ್ಮ ಮಾಜಿ ಬಿಸಿನೆಸ್ ಪಾರ್ಟ್ನರ್‌ಗಳಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ 15 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ನಿಲುವು ವಿವರಿಸುವಂತೆ ಧೋನಿಗೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಲಾಗಿದೆ. ಧೋನಿ ಅವರು ಮಿಹಿರ್ ವಿರುದ್ಧ ವ್ಯವಹಾರ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.
ನಂತರ ಮಿಹಿರ್ ಮತ್ತು ಸೌಮ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದರು. 2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದಾರೆ, ಜತೆಗೆ ನನ್ನ ಹೆಸರು ಬಳಸಿ 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಾಸ್ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಇದೇ ಜನವರಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.