ಬೆಂಗಳೂರು: ರಾಜ್ಯದಲ್ಲಿ ಜುಲೈ 1ರಿಂದ ದುಬಾರಿ ಮದ್ಯದ ಬೆಲೆ ಇಳಿಕೆ ಮಾಡಲಿದ್ದು ನಷ್ಟವನ್ನ ಕಡಿಮೆ ಮಾಡಲು 16 ಸ್ಲ್ಯಾಬ್ಗಳ ದರ ಇಳಿಕೆ ಆಗಲಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಈ ಸಂಬಂಧ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು ಅಬಕಾರಿ ತೆರಿಗೆ ಇಳಿಕೆ ಹಿನ್ನಲೆ ನಷ್ಟವನ್ನ ಕಡಿಮೆ ಮಾಡಲು 16 ಸ್ಲ್ಯಾಬ್ಗಳ ದರ ಇಳಿಕೆ ಮಾಡಿ ಹೊರ ರಾಜ್ಯಗಳ ಮದ್ಯದ ದರ ಆಧರಿಸಿ ಹೊಸ ಬೆಲೆ ನಿಗದಿ ಮಾಡಲಾಗಿದೆ. ಆದ್ರೆ ಇದ್ರಲ್ಲೂ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚೋ ಕೆಲ್ಸ ಮಾಡಿದ್ದು, ಬಡವರ ಬ್ರ್ಯಾಂಡ್‌ಗಳ ಬೆಲೆ ಏರಿಕೆ ಮಾಡಿ ಶ್ರೀಮಂತರ ಬ್ರ್ಯಾಂಡ್ ಬೆಲೆ ಕಡಿಮೆ ಮಾಡಿದೆ. 180 ml ಷಿವಾಸ್ ಈ ಮೊದಲು 1009 ರೂಪಾಯಿ ಬೆಲೆ ಇತ್ತು ಆದ್ರೀಗ ಈ ಬ್ರ್ಯಾಂಡ್ 872 ರೂಪಾಯಿಗೆ ಇಳಿಕೆ ಮಾಡಲಾಗಿದೆ. 137 ರೂಪಾಯಿ ಬೆಲೆ ಕಡಿಮೆ ಮಾಡಲಾಗಿದೆ. 905 ರೂಪಾಯಿಗೆ ಸಿಕ್ತಿದ್ದ ಜಾನಿ ವಾಕರ್ ಈಗ 775ರೂಪಾಯಿಗೆ ಸಿಗಲಿದೆ. ₹678 ಇದ್ದ ಬ್ಲಾಕ್ & ವೈಟ್ 592ರೂಪಾಯಿಗೆ ಸಿಗಲಿದೆ. 100 ಪೈಪರ್ಸ್ ಈ ಮೊದಲು ₹678 ರೂಪಾಯಿ ಇತ್ತು ಆದ್ರೀಗ ₹592ಕ್ಕೆ ಬೆಲೆ ಇಳಿಕೆ ಮಾಡಲಾಗಿದೆ. 383ರೂಪಾಯಿಗೆ ಸಿಗ್ತಿದ್ದ ರಾಯಲ್ ಚಾಲೆಂಜರ್ಸ್ ವಿಸ್ಕಿ ಈಗ ₹290ಕ್ಕೆಲ್ಲಾ ಸಿಗಲಿದೆ. ಇನ್ನೂ ಓಲ್ಡ್ ಮಾಂಕ್ ಮೊದಲು 180 MLಗೆ 159 ಬೆಲೆಯಿತ್ತು. ಈಗ 9 ರೂಪಾಯಿ ಬೆಲೆ ಕಮ್ಮಿ ಮಾಡಲಾಗಿದೆ. ಇತ್ತ 123 ಇದ್ದ 8PM ಬ್ರ್ಯಾಂಡ್ ಈಗ 128 ರೂಪಾಯಿ ಮಾಡಲಾಗಿದೆ. 100 ರೂಪಾಯಿ ಇದ್ದ ಓಟಿ ಈಗ 104 ರೂಪಾಯಿ ಆಗಿದೆ. 100 ರೂಪಾಯಿಯಿದ್ದ ಬಿಪಿಆರ್ ಈಗ 104 ರೂಪಾಯಿ ಮಾಡಲಾಗಿದೆ. ಇತ್ತ ಅತಿ ಹೆಚ್ಚು ಸೇಲ್ ಆಗೋ ರಾಜಾ ವಿಸ್ಕಿ ಈ ಮೊದಲು 80 ರೂಪಾಯಿಗೆಲ್ಲಾ ಸಿಕ್ತಾ ಇತ್ತು ಆದ್ರೀಗ ಇದರ ಬೆಲೆಯೂ 4 ರೂಪಾಯಿಹೆಚ್ಚಿಸಲಾಗಿದೆ. ಗಡಿ ಭಾಗದಲ್ಲಿರೋ ಮದ್ಯಪ್ರಿಯರು ಬೇರೆ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ ಅಂತ ಅಲ್ಲಿ ಹೋಗಿ ಮದ್ಯ ಖರೀದಿ ಮಾಡ್ತಿದ್ರು. ಇದ್ರಿಂದ ಬೇರೆ ರಾಜ್ಯದ ಅಬಕಾರಿ ಬೊಕ್ಕಸ ತುಂಬಿ ನಮ್ಮ ರಾಜ್ಯದ ಬೊಕ್ಕಸ ಬರಿದಾಗಿತ್ತು. ಈ ನಿಟ್ಟಿನಲ್ಲಿ ಪ್ಲಾನ್ ಮಾಡಿರೋ ಸರ್ಕಾರ ಬೇರೆ ರಾಜ್ಯದ ಮದ್ಯದ ದರ ಆಧರಿಸಿ ರಾಜ್ಯದಲ್ಲಿ ದರ ಪರಿಷ್ಕರಣೆ ಮಾಡಿದೆ..
