ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 1 ಸಾವಿರದ 589 ಕೋಟಿ ಲೀಟರ್‌ಗೆ ಏರಿಕೆಯಾಗಿದ್ದು, ದೇಶೀಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆಹಾರ, ನಾಗರಿಕ ಪೂರೈಕೆ ಮತ್ತು ನವೀಕೃತ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು, ಎಥೆನಾಲ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆಯಾಗಿದೆ. ದೇಶೀಯ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಎಥೆನಾಲ್ ಉತ್ಪಾದನೆ ಹೆಚ್ಚಳದಿಂದ ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ. “ಒಂದು ರಾಷ್ಟ್ರ ಒಂದು ಪಡಿತರ ಚೀಟಿ” ಮತ್ತು “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ”ಯಡಿ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಲಾಗಿದೆ ಎಂದರು.
ಈ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದ್ದು, ಸುಮಾರು 11.80 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ. ಕಳೆದ ವರ್ಷ ಸುಮಾರು 81.35 ಕೋಟಿ ಫಲಾನುಭವಿಗಳಿಗೆ 497 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಹೇಳಿದರು. ಕರ್ನಾಟಕ ಸರ್ಕಾರ ಅಕ್ಕಿ ಪೂರೈಸುವಂತೆ ಬೇಡಿಕೆ ಸಲ್ಲಿಸಿದರೆ, ಕೆಜಿಗೆ 28 ರೂಪಾಯಿ ದರದಲ್ಲಿ ಸರಬರಾಜು ಮಾಡಲು ಸಿದ್ಧವಿದೆ ಎಂದು ತಿಳಿಸಿದರು.