ಹಿರಿಯೂರು: ಇತ್ತೀಚೆಗೆ ನೌಕರಿ ಸಮಸ್ಯೆ ಎಲ್ಲೆಡೆ ಹೆಚ್ಚಾಗಿದೆ. ಹೀಗಾಗಿ ಸ್ವಯಂ ವೃತ್ತಿಯ ದಾರಿ ಕಂಡುಕೊಂಡು ಅಭಿವೃದ್ಧಿ ಹೊಂದಬೇಕು. ಕೇವಲ ಮೀಸಲಾತಿಯಿಂದ ಅಭಿವೃದ್ಧಿ ಹೊಂದುತ್ತೇವೆಂದು ಸುಮ್ಮನೇ ಕೂರದೇ ಎಲ್ಲರೂ ವೈಯಕ್ತಿಕವಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಶನಿವಾರ ತಾಲೂಕು ವಾಲ್ಮೀಕಿ ನಾಯಕ ಸಮಾಜ, ವಾಲ್ಮೀಕಿ ನೌಕರರ ಸಂಘ, ವಾಲ್ಮೀಕಿ ನಾಯಕ ವಕೀಲರ ಸಂಘ, ವಾಲ್ಮೀಕಿ ನಾಯಕ ನಿವೃತ್ತ ನೌಕರರ ಸಂಘದ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಯಾರೂ ಯಾರನ್ನು ಉದ್ಧಾರ ಮಾಡುವುದಿಲ್ಲ. ಹೋರಾಟ, ಛಲ, ಹಠ ಇಟ್ಟುಕೊಂಡು ವಿದ್ಯಾರ್ಥಿಗಳು ಬದುಕನ್ನು ಎದುರಿಸಬೇಕು. ಕೇವಲ ಮೀಸಲಾತಿಯಿಂದಲೇ ಎಲ್ಲಾ ಸಮಸ್ಯೆಗಳು ಪರಿಹಾರವಾಗಲ್ಲ. ಬದುಕಿಗೆ ಬೇರೆ ಬೇರೆ ದಾರಿ ನಾವೇ ಹುಡುಕಿಕೊಳ್ಳಬೇಕು. 75 ವರ್ಷಗಳ ಹೋರಾಟದ ನಂತರ ಸಮಾಜ ಒಂದು ಹಂತ ತಲುಪಿದೆ. ಈಗಿನ ಮಕ್ಕಳು ಶೇ.80ಕ್ಕಿಂತ ಹೆಚ್ಚಿನ ಅಂಕ ತೆಗೆಯುತ್ತಿದ್ದಾರೆ.
ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದರು. ಈಗಿನ ಮತ್ತು ಈ ಹಿಂದಿನ ಸ್ವಾಮೀಜಿಗಳಿಂದಾಗಿ ವಾಲ್ಮೀಕಿ ಸಮುದಾಯ ಮುನ್ನೆಲೆಗೆ ಬರುತ್ತಿದೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಡಬೇಕಾದುದು ಆಯಾ ಸಮಾಜದ ಕರ್ತವ್ಯವಾಗಿದೆ. ಪಿಯುಸಿ ನಂತರ ವಿದ್ಯಾರ್ಥಿಗಳ ಭವಿಷ್ಯ ಪ್ರಮುಖ ಘಟ್ಟದಲ್ಲಿರುತ್ತದೆ. ಆ ಸಮಯದಲ್ಲಿ ವಿದ್ಯಾರ್ಥಿಗಳು ಆಲಸ್ಯ ತೋರದೇ ವಿದ್ಯಾಭ್ಯಾಸದ ಮಹತ್ವ ಅರಿತು ಮುನ್ನಡೆಯಬೇಕು ಎಂದು ಜಾರಕಿಹೊಳಿ ಸಲಹೆ ನೀಡಿದ್ದಾರೆ.