ಬೆಂಗಳೂರು: IAS, IRS ಸೇರಿ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆ ಸಿದ್ದತೆಗಳಿಗಾಗಿ ದೆಹಲಿಯಲ್ಲಿ sC/st ಮಕ್ಕಳಿಗೆ ಉತ್ತಮ ಹಾಸ್ಟೆಲ್ ಕಟ್ಟಿಸುವ ಜೊತೆಗೆ ತಿಂಗಳಿಗೆ 15 ಸಾವಿರ ರೂಪಾಯಿ ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.ಸದ್ಯ 10 ಸಾವಿರ ಕೊಡಲಾಗುತ್ತಿದ್ದು, ಇದೀಗ ಅದನ್ನು 5 ಸಾವಿರ ಹೆಚ್ಚಿಸಲಾಗುವುದು. ಈ ಸಂಬಂಧ ತಕ್ಷಣ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಪರಿಷತ್ ನ ಸಭೆ ನಡೆಸಿದ್ದ, SCSP/TSP ಪರಿಷತ್ ಸಭೆಯ ಕೊನೆಯಲ್ಲಿ ಮುಖ್ಯಮಂತ್ರಿಗಳು ಇಲಾಖೆಯ ಅಧಿಕಾರಿಗಳಿಗೆ ಕೊಟ್ಟ ಸ್ಪಷ್ಟ ಸೂಚನೆಗಳನ್ನು ನೀಡಿದ್ದು, ಅವು ಈ ಕೆಳಗಿನಂತಿವೆ.
2024-25 ನೇ ಸಾಲಿಗೆ scsp/tsp ನಲ್ಲಿ ಲಭ್ಯ ಇರುವ ಹಣವನ್ನು ಖರ್ಚು ಮಾಡಲು action plan ಅನುಮೋದನೆ ಮಾಡಲಾಗಿದೆ.ರಾಜ್ಯದ ಅಭಿವೃದ್ಧಿ ಆಯವ್ಯಯ ಈ ಸಾಲಿನಲ್ಲಿ ಒಟ್ಟು 160000 ಕೋಟಿ. ಇದರಲ್ಲಿ scsp/tsp ಗೆ ಸುಮಾರು 39121.46 ಕೋಟಿ scsp/tsp ಅಡಿ 34 ಇಲಾಖೆಗಳಿಗೆ ಹಂಚಿಕೆ ಮಾಡಿರುವ ಹಣ action plan ನಲ್ಲಿದೆ.ಹಿಂದಿನ ವರ್ಷ 97.81 ಕೋಟಿ ಉಳಿತಾಯವಾಗಿದೆ. ಈ ಹಣವೂ ಸೇರಿದೆ.ಕಳೆದ ವರ್ಷಕ್ಕಿಂತ ಈ ವರ್ಷ 3900 ಕೋಟಿ ಹೆಚ್ಚಾಗಿದೆ. 3900 ಕೋಟಿ ಹೆಚ್ಚುವರಿ ಹಣ ಈ ವರ್ಷ ನೀಡಿದ್ದೇವೆ. ಈ ಹಣ ಇಲಾಖೆಗಳಿಗೆ ಹಂಚಿಕೆಯಾಗಿದ್ದು ಇದರ ಸದುಪಯೋಗ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ನಿಗಮಗಳು ಕಾಯ್ದೆಯ ಉದ್ಸೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕು.ಶೇ100 ಸಾಧನೆ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಕಾಯ್ದೆಯಲ್ಲಿದ್ದ 7D ರದ್ದು ಮಾಡಿದ ರೀತಿಯಲ್ಲೇ 7C ಕೂಡ ರದ್ದು ಮಾಡಬೇಕು ಎನ್ನುವ ಶಾಸಕ ನರೇಂದ್ರಸ್ವಾಮಿ ಅವರು ಸಲಹೆ ನೀಡಿದ್ದಾರೆ. ಈ ಸಲಹೆಯ ಸಾಧಕ ಬಾದಕಗಳನ್ನು ಪರಿಶೀಲಿಸಲಾಗುವುದು ಎಂದರು.
ಖಾಲಿ ಇರುವ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಆರಂಭಿಸಲೇಬೇಕು.ಆಯಾ ಹೋಬಳಿಯ ವಿದ್ಯಾರ್ಥಿಗಳಿಗೆ ಶೇ75 ರಷ್ಟು ಸೀಟು, ಉಳಿದ ಶೇ25 ರಷ್ಟು ಸೀಟುಗಳನ್ನು ಇತರೆ ಪ್ರದೇಶದ ವಿಧ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ನೀಡಬೇಕು.ಸರ್ಕಾರಿ ಶಾಲೆಗಿಂತ ಕ್ರೈಸ್ ನಲ್ಲಿ ಓದಿರುವ ಬಡ ವಿಧ್ಯಾರ್ಥಿನಿ ಕ್ರೈಸ್ ಶಾಲೆಯಲ್ಲಿ ಓದಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಇದನ್ನು ಪ್ರೋತ್ಸಾಹಿಸುತ್ತಲೇ ಇತರೆ ನ್ಯೂನ್ಯತೆಗಳನ್ನು ಸರಿಪಡಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಬಜೆಟ್ ನಲ್ಲಿ ನಾವು ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನೂ ನೀವು ಜಾರಿ ಮಾಡಲೇಬೇಕು.ಹಿಂದಿನ ಬಿಜೆಪಿ ಸರ್ಕಾರ ಮೂರು ವರ್ಷ ಕ್ರೈಸ್ ಮಕ್ಕಳಿಗೆ ಬಾತ್ ರೂಮ್ ಕಿಟ್ ಕೊಡ್ಲೇ ಇಲ್ಲ. ಈಗ ನಾವು ಸರಿಯಾಗಿ ವಿತರಿಸುತ್ತಿದ್ದೇವೆ ಎಂದರು.
ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವುದು ಕಂಡುಬಂದಿದೆ. ಇದಕ್ಕೆ ಅವಕಾಶ ಆಗಬಾರದು. ಮನೆಗೆ ಕರೆದೊಯ್ಯದಂತೆ ಪೋಷಕರಿಗೆ ಒಪ್ಪಿಸಬೇಕು.ಹಳ್ಳಿಗಾಡು, ಬಡ ಕುಟುಂಬಗಳಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸರಿಯಾಗಿ ತಲುಪಿಸಬೇಕು. ಇದರಲ್ಲಿ ವಿಫಲರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಸೂಚಿಸಿದರು.
ನಾವು ಕೊಟ್ಟ ಅನುದಾನ ಆಯಾ ಉದ್ದೇಶಗಳಿಗೇ ಬಳಕೆಯಾಗಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲದಂತೆ ಆಯಾ ಸಮುದಾಯಗಳಿಗೆ ಸವಲತ್ತು ತಲುಪಿಸಬೇಕು.
ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದಿದ್ದರೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು.10 ವರ್ಷದಲ್ಲಿ ಈ ಯೋಜನೆಯಿಂದ ಸಮುದಾಯದ ಮೇಲೆ ಬೀರಿರುವ ಪರಿಣಾಮ, ಸಮುದಾಯಕ್ಕೆ ಯೋಜನೆ ತಲುಪಿರುವ ಪ್ರಮಾಣದ ಬಗ್ಗೆ, ಹಾಗೂ ಅವರ ಆರ್ಥಿಕ ಸ್ಥಿತಿ ಪ್ರಗತಿ ಆಗಿರುವ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು. 3 ತಿಂಗಳ ಬಳಿಕ ಮತ್ತೊಮ್ಮೆ ಪರಿಷತ್ ಸಭೆ ಕರೆಯುತ್ತೇವೆ. ಯಾರಿಂದ ಲೋಪ ಆಗಿದೆ ಎಂದು ಗೊತ್ತಾದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನಿಡಿದ್ದಾರೆ.