ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಭಾರತದಲ್ಲಿ ಈ ವರ್ಷ ನಡೆಯಲಿರುವ ಪುರುಷರ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಮುಂಬೈನಲ್ಲಿ ನಡೆದ 100 ದಿನಗಳ ವಿಶ್ವಕಪ್ ಸಮಾರಂಭದಲ್ಲಿ ಬಿಸಿಸಿಐ ಹಾಗೂ ಐಸಿಸಿ ವಿಶ್ವಕಪ್ 2023 ವೇಳಾಪಟ್ಟಿಯನ್ನು ಅನಾವರಣಗೊಳಿಸಿದೆ. ಅಕ್ಟೋಬರ್ 5 ರಂದು ಏಕದಿನ ವಿಶ್ವಕಪ್ಗೆ ಚಾಲನೆ ಸಿಗಲಿದ್ದು ನವೆಂಬರ್ 19 ರವರೆಗೆ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಅಂತಿಮ ಫೈನಲ್ ಪಂದ್ಯವು ಅಹಮದಾಬಾದ್‌ನಲ್ಲಿ ನವೆಂಬರ್ 19 ರಂದು ನಡೆಯಲಿದೆ. ಇಡೀ ವಿಶ್ವವೇ ಕಾದು ಕುಳಿತಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೂಲಕ ಪಾಕ್ ತಂಡ ಬರೋಬ್ಬರಿ ಏಳು ವರ್ಷಗಳ ಬಳಿಕ ಭಾರತಕ್ಕೆ ಕಾಲಿಡುತ್ತಿದೆ. ಪಾಕಿಸ್ತಾನ ತಂಡ ಕೊನೆಯದಾಗಿ 2016ರ ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಬಂದಿತ್ತು. ಆಗ ಕೋಲ್ಕತ್ತಾಡ ಈಡನ್ ಗಾರ್ಡನ್ಸ್ನಲ್ಲಿ ಭಾರತ ವಿರುದ್ಧ ಸೆಣೆಸಾಟ ನಡೆಸಿತ್ತು. ಆ ಬಳಿಕ ಪಾಕ್ ಭಾರತದ ನಾಡಿಗೆ ಬಂದಿರಲಿಲ್ಲ. ಇದೀಗ ಏಳು ವರ್ಷಗಳ ಬಳಿಕ ಭಾರತಕ್ಕೆ ಕಾಲಿಡುತ್ತಿದೆ. ಪಾಕಿಸ್ತಾನ ತಂಡ ಅಕ್ಟೋಬರ್ 6 ರಂದು ಕ್ವಾಲಿಫೈಯರ್ 1 ತಂಡದ ವಿರುದ್ಧ ಹೈದರಾಬಾದ್ನಲ್ಲಿ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಭಾರತದ ಹೈದರಾಬಾದ್, ಅಹ್ಮದಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಪಾಕ್ ವಿಶ್ವಕಪ್ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಒಟ್ಟು ಎರಡು ಪಂದ್ಯಗಳನ್ನು ಆಡಲಿದೆ. ಮೊದಲಿಗೆ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ನವೆಂಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೀಮ್ ಇಂಡಿಯಾ ಒಟ್ಟು ಒಂತ್ತು ಪಂದ್ಯಗಳನ್ನ ಆಡಲಿದೆ. ಭಾರತ ಹಾಗೂ ಪಾಕ್ ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.