ಮಳೆಯ ನೀರು ಸಾಗಿ ಹೋಗುವ ಮೋರಿ ಒಂದಷ್ಟು ಹೊತ್ತು ನೂರಾರು ಜನರನ್ನು ಆಕರ್ಷಿಸಿಬಿಟ್ಟಿತ್ತು. ನೋಡ ನೋಡುತ್ತಲೇ ಅಲ್ಲಿ ಬಂದವರ ಕೈಗೆಲ್ಲಾ ₹500 ನೋಟುಗಳು ಸಿಕ್ಕಿಬಿಟ್ಟವು. ಯಾರೆಲ್ಲಾ ಸಾಲುಗಟ್ಟಿ ಅಲ್ಲಿ ಓಡಿ ಬಂದರೋ, ಪ್ರತಿಯೊಬ್ಬರಿಗೂ 500ರ ನೋಟುಗಳು ಸಿಕ್ಕಿವೆ. ಹೀಗೆ ಏಕಾಏಕಿ ಆ ಮೋರಿ ಬಳಿ ಬಂದವರಿಗೆ ಅದೃಷ್ಟ ಲಕ್ಷ್ಮೀಯೇ ಸಿಕ್ಕಂತಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ₹500 ನೋಟುಗಳು ತೇಲಾಡುತ್ತಿದ್ದವು. ಮೊದಲಿಗೆ ನಕಲಿ ನೋಟು ಅಂದುಕೊಂಡಿದ್ದರು. ತೀರಾ ಒಂದು ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮೇಲೆಯೇ ಇದು ಅಸಲಿ ನೋಟು ಅನ್ನೋದು ಗೊತ್ತಾಗಿದ್ದು. ಜೋರಾಗಿ ಸುರಿದ ಮಳೆಯಿಂದ ಮೋರಿಗಳಲ್ಲಿ ಪ್ರವಾಹಕ್ಕೆ ಜನಗಳಿಗೆ ಮೋರಿಯಲ್ಲಿ ₹500 ನೋಟುಗಳು ಸಿಕ್ಕಿವೆ. ಹಾಗಾಗಿಯೇ ಜನ ಅದೃಷ್ಟ ಖುಲಾಯಿಸಿದೆ ಅಂತ ಜೇಬಿಗೆ ಹಾಕಿಕೊಂಡಿದ್ದಾರೆ. ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಅನ್ನೋ ಯೋಚನೆ ಮಾಡುತ್ತಿದ್ದಾರೆ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆ. ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನೋದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್ ಪಡೆಯಬಹುದು ಅನ್ನುವ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರೋ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ಅಲ್ಲದೇ, ಈ ಹಣದ ವಾರಸುದಾರರು ಯಾರು ಅನ್ನೋ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ.