ದೆಹಲಿ: ರಾಜ್ಯಕ್ಕೆ ಎನ್‌ಡಿಆರ್‌ಎಫ್‌ನಿಂದ ನೀಡಬೇಕಾದ ಅಗತ್ಯ ಬರ ಹರಿಹಾರ ನೀಡದೇ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದು, ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಬರ ಪರಿಹಾರದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರ ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಕೇಂದ್ರಕ್ಕೆ ಇಂದು ಮತ್ತೆ ಚಾಟಿ ಬೀಸಿದೆ.
ಈ ವೇಳೆ ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ವೆಂಕಟರಮಣಿ ಅವರು, ಇಂದು ನ್ಯಾ.ಬಿ.ಆರ್.ಗಾವಾಯಿ ಅವರ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಸುಧೀರ್ಘವಾದ ಉತ್ತರವನ್ನು ನೀಡುತ್ತ-ಕರ್ನಾಟಕಕ್ಕೆ ಈ ತಿಂಗಳೊಳಗೇ ಬರ ಪರಿಹಾರ ನೀಡಲು ಸಿದ್ಧರಿದ್ದೇವೆ. ಆದರೆ, ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ನಮ್ಮ ಈ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಆದಾಗ್ಯೂ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾಗಿ ಮನವಿಯೊಂದನ್ನು ಸಲ್ಲಿಸುವ ಮೂಲಕ ಕರ್ನಾಟಕದ ಬರ ಪರಿಹಾರದ ಹಣ ನೀಡಲು ಅನುಮತಿ ಪಡೆಯಲಾಗುವುದು ಎಂದರು. ಈ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಅದೇನು ಮಾಡ್ತೀರೋ ಮಾಡಿ. ಈ ತಿಂಗಳ 29 ರೊಳಗೆ ಹಣ ಬಿಡುಗಡೆ ಮಾಡಿ ಅಂತಾ ತಾಕೀತು ಮಾಡಿತು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ರಾಜ್ಯದಲ್ಲಿ ಮಳೆಯ ಅಭಾವದಿಂದ 236 ತಾಲೂಕಿನಲ್ಲಿ ಬರ ಆವರಿಸಿದ್ದರೆ, ಈ ಪೈಕಿ 226 ತಾಲೂಕುಗಳಲ್ಲಿ ತೀವ್ರ ಬರ ಕಾಣಿಸಿಕೊಂಡ ಪರಿಣಾಮ ಇಲ್ಲಿನ ಜನ ಜಾನುವಾರುಗಳಿಗೆ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರನ್ನು ಸಂಕಷ್ದದಿಂದ ಪಾರು ಮಾಡಲು ಕೂಡಲೇ ಎನ್ ಡಿ ಆರ್ ಎಫ್ ನಿಂದ ಪರಿಹಾರ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಯವರಿಗೆ ಪತ್ರಗಳ ಮೇಲೆ ಪತ್ರ ಬರೆದಿದ್ದರು. ಅದಕ್ಕೆ ಸ್ಪಂದನೆ ಸಿಗದಿದ್ದಾಗ ಸ್ವತಃ ನಿಯೋಗವೊಂದನ್ನು ದಹಲಿಗೆ ತೆಗೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಬರ ಹಣ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿದ್ದರು.
ಅದಾವುದಕ್ಕೂ ಕ್ಯಾರೆ ಎನ್ನದ ಕೇಂದ್ರದ ವಿರುದ್ಧವೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಇಷ್ಟಾದರೂ ಬರ ಹಣ ರಾಜ್ಯಕ್ಕೆ ಬಾರದೇ ಇದ್ದಾಗ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಮೂಲಕ ಕೇಂದ್ರಕ್ಕೆ ಕಾನೂನು ಹೋರಾಟದ ಎಚ್ಚರಿಕೆ ನೀಡಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್, ಕರ್ನಾಟಕದ ಅರ್ಜಿಯನ್ನು ಪುರಸ್ಕರಿಸುವುದರೊಂದಿಗೆ. ಏಪ್ರಿಲ್ 8 ರಂದು ಕೇಂದ್ರಕ್ಕೆ ನೋಟೀಸ್ ಜಾರಿ ಮಾಡಿ ಎರಡು ವಾರಗಳಲ್ಲೇ ಉತ್ತರಿಸುವಂತೆ ಖಡಕ್ ಸೂಚನೆಯನ್ನು ನೀಡಿತ್ತು.