ನವದೆಹಲಿ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನ ಕ್ರೀಡಾಕೂಟದ 4ನೇ ದಿನದಂದು ಭಾರತ 73ನೇ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದ್ದು, ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, ಭಾರತದ ಪ್ಯಾರಾ ಅಥ್ಲೀಟ್‌ಗಳು 16ನೇ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಈ ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗೆದ್ದ ಹೊಸ ದಾಖಲೆ ನಿರ್ಮಿಸಿದರ ಜೊತೆಗೆ ಏಷ್ಯನ್ ಪ್ಯಾರಾ ಗೇಮ್ಸ್‌ನ 4 ನೇ ದಿನದಂದು ಮಹಿಳೆಯರ ಸಿಂಗಲ್ಸ್ SH6 ಬ್ಯಾಡ್ಮಿಂಟನ್ ಈವೆಂಟ್ನಲ್ಲಿ ನಿತ್ಯಾ ಶ್ರೀ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 73 ನೇ ಪದಕವನ್ನು ತಂದುಕೊಟ್ಟರು. ಈ ಮೂಲಕ ಭಾರತ ಏಷ್ಯನ್ ಪ್ಯಾರಾ ಗೇಮ್ಸ್ ಇತಿಹಾಸದಲ್ಲಿ ಅತ್ಯಧಿಕ ಪದಕ ಗೆದ್ದು 2018 ರಲ್ಲಿ ನಡೆದಿದ್ದ, ಏಷ್ಯನ್ ಪ್ಯಾರಾ ಗೇಮ್ಸ್ನ ಹಳೆಯ ದಾಖಲೆಯನ್ನು ಮುರಿದಿದೆ.
ಪ್ರಮುಖವಾಗಿ ಈ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಶೂಟರ್ ಸಿದ್ಧಾರ್ಥ ಬಾಬು ಮುಖ್ಯ ಪಾತ್ರವಹಿಸಿದ್ದರು. ಸಿದ್ಧಾರ್ಥ ಅವರು R6 ಮಿಶ್ರಿತ 50m ರೈಫಲ್ಸ್ ಪ್ರೋನ್ SH-1 ಈವೆಂಟ್ನಲ್ಲಿ ಚಿನ್ನದ ಪದಕ ಗೆದ್ದು, ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ದಾಖಲೆ ನಿರ್ಮಿಸಿದರು. ಇದರೊಂದಿಗೆ 2024 ರಲ್ಲಿ ಪ್ಯಾರಿಸ್ನಲ್ಲಿ ನಡೆಯಲ್ಲಿರುವ ಪ್ಯಾರಾಲಿಂಪಿಕ್ಸ್ಗೂ ಅವಕಾಶ ಗಿಟ್ಟಿಸಿಕೊಂಡರು. ಇನ್ನು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿರುವ ಭಾರತದ ಎಲ್ಲಾ ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶ್ಲಾಘಿಸಿದ್ದಾರೆ.