ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಲಾ, ಕಾಲೇಜು, ಐಟಿ, ಬಿಟಿ ಸಂಸ್ಥೆಗಳು, ಕಾರ್ಖಾನೆಗಳು ಇತರೇ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲರೂ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡದ ಧ್ವಜಾರೋಹಣ ಮಾಡುವ ಮೂಲಕ ಆಚರಿಸಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಮಹತ್ವ ತಿಳಿಸಲು, ಸರ್ಕಾರಿ ಹಾಗೂ ಖಾಸಗಿ ಶಾಲೆ ಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಇದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬೆಂಗಳೂರು ನಗರದಲ್ಲಿ ಶೇ.50 ರಷ್ಟು ಮಂದಿ ರಾಜ್ಯದ ಹೊರಗಿನವರು. ಅವರುಗಳು ಕನ್ನಡ ಕಲಿಯಲು ಅವಕಾಶ ಕಲ್ಪಿಸಬೇಕಿದೆ. ಐಟಿ, ಬಿಟಿ ಹಾಗೂ ಕಾರ್ಖಾನೆಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡದಿದ್ದರೂ, ಕನ್ನಡ ಬಾವುಟ ಹಾರಿಸಿ ರಾಜ್ಯೋತ್ಸವ ಆಚರಿಸಬೇಕು. ರಾಜ್ಯೋತ್ಸವ ಆಚರಣೆ ಮಾಡುವ ಸಂಸ್ಥೆಗಳು ಬಿಬಿಎಂಪಿಯಿಂದ ನೀಡುವ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮೂಲಕ ಫೋಟೋಗಳನ್ನು ರವಾನಿಸಬೇಕು. ಈ ಬಾರಿ ರಾಜ್ಯದೆಲ್ಲೆಡೆ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡ ಕಲಿಯಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಈ ತೀರ್ಮಾನ ಪ್ರಕಟಿಸುತ್ತಿದ್ದೇನೆ ಎಂದು ತಿಳಿಸಿದರು. “ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಹೀಗಾಗಿ ಯಾವುದೇ ಕನ್ನಡಪರ ಸಂಘಟನೆ ಅಥವಾ ಇತರರು ಯಾವುದೇ ಸಂಸ್ಥೆಗೆ ಆಚರಣೆ ಬಗ್ಗೆ ಬೆದರಿಕೆ ಹಾಕುವಂತಿಲ್ಲ. ತೊಂದರೆ ನೀಡುವಂತಿಲ್ಲ. ಒಂದು ವೇಳೆ ತೊಂದರೆ ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
