ನವದೆಹಲಿ: ಬೆಲೆ ಏರಿಕೆಯಲ್ಲಿ ಟೊಮೆಟೊ ಬಳಿಕ ಈಗ ಮೆಣಸಿನಕಾಯಿ ಸರದಿ ಶುರುವಾಗಿದೆ. ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ ಏರಿಕೆ ಕಂಡಿದೆ. ಕಳೆದ ತಿಂಗಳು 60 ರೂ.ಗಳ ಆಸುಪಾಸಿನಲ್ಲಿದ್ದ ಹಸಿರು ಮೆಣಸಿನಕಾಯಿ ಈಗ ಪ್ರತಿ ಕೆಜಿಗೆ 170 ರೂ.ಗಳಿಗೆ ಏರಿಕೆಯಾಗಿದೆ. ಇದರ ಜೊತೆಗೆ ಟೊಮೆಟೊ ಬೆಲೆ ಏರಿಕೆಯೂ ಮುಂದುವರಿದಿದೆ.
ಉತ್ತರಾಖಂಡ ರಾಜ್ಯದ ಗಂಗೋತ್ರಿ, ಯಮುನೋತ್ರಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 250 ರೂ. ಏರಿಕೆಯಾಗಿದೆ. ಉತ್ತರಕಾಶಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 200 ರೂ. ತಲುಪಿದ್ದು, ಕೋಲ್ಕತ್ತಾದಲ್ಲಿ 152 ರೂ., ದೆಹಲಿಯಲ್ಲಿ 120 ರೂ., ಚೆನ್ನೈನಲ್ಲಿ 117 ರೂ., ಮುಂಬೈನಲ್ಲಿ 108 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲೂ 100 ರಿಂದ 130 ರೂ.ವೆರೆಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಶುಂಠಿ ಹಾಗೂ ಹೂಕೋಸಿನ ಬೆಲೆಯೂ ಹೆಚ್ಚಾಗಿದೆ.