ಬೆಂಗಳೂರು: ‘ಮಹದೇವಪುರ ಕ್ಷೇತ್ರದಲ್ಲಿ 1 ಬಿಎಚ್‌ಕೆ ಮನೆಯಲ್ಲಿ 80 ಮಂದಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ’ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಆ ಮನೆ ಮಾಲಿಕ ಜಯರಾಮ್ ರೆಡ್ಡಿ ಪ್ರತಿಕ್ರಿಯಿಸಿ, ತಿರುಗೇಟು ನೀಡಿದ್ದಾರೆ. ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದವರೆಗೆ ವಾಸಿಸುವ ವಲಸೆ ಕಾರ್ಮಿಕರು ತಮ್ಮ ಮನೆಗೆ ಬಾಡಿಗೆಗೆ ಬರುತ್ತಾರೆ.
ಮನೆ ಮಾಲೀಕ ಹೇಳಿದೇನು?
ಮನೆ ಮಾಲೀಕ ಜಯರಾಮ್ ರೆಡ್ಡಿ ಸವಾಲು ಈ 35 ಮನೆಗಳ ಮಾಲೀಕರಾದ ಜಯರಾಮ್ ರೆಡ್ಡಿ ಅವರು ರಾಹುಲ್ ಗಾಂಧಿ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. “ನೋಡಿ, ಇವೆಲ್ಲ 10×15 ಅಳತೆಯ ಸಣ್ಣ ಮನೆಗಳು. ಇಲ್ಲಿರುವವರೆಲ್ಲರೂ ಕೂಲಿ ಮಾಡಿ ಜೀವಿಸುವ ಉತ್ತರ ಭಾರತದ ಬಡ ಕಾರ್ಮಿಕರು. ಇಂತಹ ಪುಟ್ಟ ಮನೆಯಲ್ಲಿ 80 ಮಂದಿ ಇರಲು ಸಾಧ್ಯವೇ? ಇದು ಶುದ್ಧ ಸುಳ್ಳು. ಇಲ್ಲಿಗೆ ಬಾಡಿಗೆಗೆ ಬರುವವರು ಮೂರು ತಿಂಗಳು, ಆರು ತಿಂಗಳು ಇದ್ದು, ಬೇರೆ ಕೆಲಸ ಸಿಕ್ಕಾಗ ಮನೆ ಖಾಲಿ ಮಾಡಿ ಹೋಗುತ್ತಾರೆ. ಆದರೆ, ಅವರು ತಮ್ಮ ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸಿರುವುದಿಲ್ಲ. ಬಹುಶಃ ಹಾಗಾಗಿ ಹಳೆಯವರ ಹೆಸರುಗಳು ಪಟ್ಟಿಯಲ್ಲಿ ಉಳಿದಿರಬಹುದು. ಈ ಬಗ್ಗೆ ಯಾವುದೇ ತನಿಖೆ ನಡೆಸಿದರೂ ಎದುರಿಸಲು ನಾನು ಸಿದ್ಧ,” ಎಂದು ಅವರು ಸವಾಲು ಹಾಕಿದ್ದಾರೆ.
ತಮ್ಮ ಹಾಗೂ ಬಿಜೆಪಿ ನಡುವಿನ ಸಂಪರ್ಕದ ಬಗ್ಗೆ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಯರಾಮ್ ರೆಡ್ಡಿ, ನಾನು ಕಾಂಗ್ರೆಸ್ ಸದಸ್ಯನಾಗಿದ್ದೇನೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದೇನೆ. ಬಿಜೆಪಿಯೊಂದಿಗೆ ಯಾವುದೇ ರಾಜಕೀಯ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.