ನವದೆಹಲಿ: “ನಾವು ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕ್ರಮೇಣ ಅಳವಡಿಸಿಕೊಳ್ಳಬೇಕು. ಇದು ಕೇವಲ ವಿದ್ಯಾರ್ಥಿಯ ಕೆಲಸವಲ್ಲ; ಈ ಪ್ರಕ್ರಿಯೆಯನ್ನು ಸುಲಭಗೊಳಿಸುವ ಜವಾಬ್ದಾರಿಯು ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರ ಮೇಲೆ ಕೂಡ ಇದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಅವರು ‘ಪರೀಕ್ಷಾ ಪೇ ಚರ್ಚಾ 2024’ ರ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಭಾಗವಹಿಸಿ ಮಾತನಾಡಿದ ಅವರು, ಕೆಲ ಸಲಹೆಗಳನ್ನು ನೀಡಿದ್ದಾರೆ.
“ಪರೀಕ್ಷೆಯಲ್ಲಿ ಬರಹ ಮುಖ್ಯವಾದ್ದರಿಂದ, ಪರೀಕ್ಷೆಯ ಮೊದಲು ನೀವು ಓದಿದ್ದನ್ನು ಬರೆಯುವುದು ಮುಖ್ಯ. ಇದರಿಂದ ತೀಕ್ಷ್ಣತೆ ಹೆಚ್ಚಾಗುತ್ತದೆ. ಪರೀಕ್ಷಾ ಹಾಲ್‌ನಲ್ಲಿ ಅಕ್ಕಪಕ್ಕದವರು ಎಷ್ಟು ವೇಗವಾಗಿ ಬರೆಯುತ್ತಿದ್ದಾರೆ ಎಂದು ನೋಡಬೇಡಿ. ನಿಮ್ಮನ್ನು ನಂಬಿ “ಎಂದು ಹೇಳಿದ್ದಾರೆ.
ಇದೇ ವೇಳೆ “ನಿಮಗೆ ನೀವೇ ಸ್ಪರ್ಧಿಯಾಗಿ, ಇತರರ ಬಗ್ಗೆ ಅಸೂಯೆ ಪಡಬೇಡಿ, ಸ್ನೇಹಿತರು ಪರಸ್ಪರ ಜ್ಞಾನವನ್ನು ಹಂಚಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಸ್ಪರ್ಧೆಯಲ್ಲಿ ತೊಡಗಬಾರದು. ಪಾಲಕರು ಕೂಡ ಮಕ್ಕಳಲ್ಲಿ ಸ್ಪರ್ಧೆಯ ಭಾವನೆ ಮೂಡಿಸಬಾರದು” ಎಂದು ಹೇಳಿದ್ದಾರೆ