ಚಿತ್ರದುರ್ಗ : ಒನಕೆಯ ಮೂಲಕ ಶತ್ರುಗಳನ್ನು ಸದೆಬಡಿದ ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಕೆಲವರು ಬಸವಣ್ಣನವರ ಪ್ರತಿಮೆ ಇರಿಸಲು ಹೊರಟಿರುವುದನ್ನು ವಿರೋಧಿಸಿ ಕರುನಾಡ ವಿಜಯಸೇನೆಯಿಂದ ಭಾನುವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಹೈಮಾಸ್ ದೀಪದ ವೃತ್ತದಲ್ಲಿ ಒನಕೆ ನೆಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಒನಕೆ ಓಬವ್ವ ಪ್ರತಿಮೆಗೆ ಅರಿಶಿಣ, ಕುಂಕುಮ ಹಚ್ಚಿ ಹಾಲಿನ ಅಭಿಷೇಕ ಮಾಡಿದ ಪ್ರತಿಭಟನಾಕಾರರು ಒನಕೆ ಓಬವ್ವನ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಯಾರಾದರೂ ಮಾಡಲು ಮುಂದಾದರೆ ನಾವುಗಳು ಸಹಿಸುವುದಿಲ್ಲ. ಸರ್ಕಾರವೇ ಗುರುತಿಸಿರುವ ಜಾಗದಲ್ಲಿರುವ ಓಬವ್ವನ ಪ್ರತಿಮೆ ಬಳಿ ಮತ್ತೊಂದು ವೃತ್ತದ ಅಗತ್ಯವಿಲ್ಲ ಎಂದು ಕಿಡಿಗೇಡಿಗಳ ವಿರುದ್ದ ಕಿಡಿ ಕಾರಿದರು.
ನಾವುಗಳು ಬಸವಣ್ಣನವರ ವಿರೋಧಿಗಳಲ್ಲ. ಆದರೆ ಒನಕೆ ಓಬವ್ವ ಪ್ರತಿಮೆ ಬಳಿ ಮತ್ತೊಂದು ಪ್ರತಿಮೆ ನಿರ್ಮಿಸುವುದು ಓಬವ್ವನಿಗೆ ಮಾಡುವ ಅಪಮಾನ. ಯಾವುದೇ ಕಾರಣಕ್ಕೂ ಈ ಜಾಗವನ್ನು ಬಸವಣ್ಣನವರ ವೃತ್ತವಾಗಲು ಬಿಡುವುದಿಲ್ಲ. ಎಷ್ಟೆ ಪ್ರಭಾವಿ ಜಾತಿಯವರಾಗಿರಲಿ, ಹಣವಂತರಿರಲಿ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಗರಾಧ್ಯಕ್ಷ ಅವಿನಾಶ್, ಉಪಾಧ್ಯಕ್ಷೆ ರತ್ನಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಣಿಕಂಠ, ರಾಜಣ್ಣ, ಅಖಿಲೇಶ್, ಪಿ.ಆರ್.ಹರೀಶ್‍ಕುಮಾರ, ಸುರೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.