ನವದೆಹಲಿ: 2024ರ ಲೋಕಸಭೆ ಚುನಾವಣೆ ಕಾವು ರಂಗೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಇದೀಗ ಬಿಡುಗಡೆಯಾದ ಸಮೀಕ್ಷೆಯು ಒಬಿಸಿ ಹಾಗೂ ದಲಿತರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ಹೇಳುತ್ತಿದೆ. ಹೌದು. ಬಿಹಾರದ ಜಾತಿ ಜನಗಣತಿ ಅಂಕಿಅಂಶಗಳು ಬಿಡುಗಡೆಯಾದ ನಂತರ ದೇಶದ 12 ರಾಜ್ಯಗಳ 48 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ನಡೆಸಲಾಗಿದೆ. ಇದರ ಪ್ರಕಾರ ಪ್ರಧಾನಿ ಮೋದಿ ನೆಚ್ಚಿನ ನಾಯಕರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ದಲಿತ ಮತದಾರರು ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಬಯಸುತ್ತಾರೆ. ಶೇ.64ರಷ್ಟು ಒಬಿಸಿ ಮತದಾರರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿದರೆ, ಶೇ.15ರಷ್ಟು ಮಂದಿ ರಾಹುಲ್ ಗಾಂಧಿ ಎರಡನೇ ಆಯ್ಕೆಯಾಗಲಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್(TV-CNX) ಸಮೀಕ್ಷೆ ತಿಳಿಸಿದೆ. ಇನ್ನು ಸಮೀಕ್ಷೆಯ ಪ್ರಕಾರ ಶೇ.58ರಷ್ಟು ಮಂದಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಯಸಿದ್ದರೆ, ಶೇ.20ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಇತರ ಆಯ್ಕೆಗಳಲ್ಲಿ, ಶೇಕಡಾ 5 ರಷ್ಟು ಒಬಿಸಿ ಮತದಾರರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಮುಂದಿನ ಪ್ರಧಾನಿಯಾಗಿ ನೋಡಲು ಬಯಸಿದ್ರೆ, ಕೇವಲ 3 ಪ್ರತಿಶತದಷ್ಟು ಜನರು ಮಾತ್ರ ನಿತೀಶ್ ಕುಮಾರ್ ಅವರೊಂದಿಗೆ ಹೋಗಬಹುದು. ಇತ್ತ ದಲಿತರಲ್ಲಿ ಶೇಕಡಾ 10ರಷ್ಟು ಮತದಾರರು ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರಧಾನಿಯಾಗಬೇಕು ಎಂದು ಬಯಸಿದರೆ, ಶೇಕಡಾ 2ರಷ್ಟು ಮಂದಿ ಮಾತ್ರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿದ್ದಾರೆ. ಒಟ್ಟಾರೆ ಶೇ.61ರಷ್ಟು ಮತದಾರರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಶೇ.21ರಷ್ಟು ಮಂದಿ ರಾಹುಲ್ ಗಾಂಧಿ, ಶೇ.3ರಷ್ಟು ಮಂದಿ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್, ಶೇ.2ರಷ್ಟು ಮಂದಿ ನಿತೀಶ್ ಕುಮಾರ್ ಮತ್ತು ಮಾಯಾವತಿಯನ್ನು ಬಯಸಿದ್ದಾರೆ.