ಚಿಕನ್ ಖಾದ್ಯಗಳಲ್ಲಿ ಯಾವ್ಯಾವ ವೆರೈಟಿ ಮಾಡುವಿರಿ? ಎಂದಾದರೂ ಚಿಕನ್ ಘೀ ರೋಸ್ಟ್ ಮಾಡಲು ಟ್ರೈ ಮಾಡಿದ್ದೀರಾ? ಅನ್ನ, ನೀರು ದೋಸೆ, ಇಡ್ಲಿ, ಚಪಾತಿ ಜತೆ ಸವಿಯಲು ಈ ಭಕ್ಷ್ಯ ತುಂಬಾ ರುಚಿಯಾಗಿರುತ್ತದೆ. ಮಂಗಳೂರು ಭಾಗದ ವಿಶೇಷ ಖಾದ್ಯವಾಗಿರುವ ಚಿಕನ್ ಘೀ ರೋಸ್ಟ್ ಅಂದ್ರೆ ಸಾಕು ಹಲವರ ಬಾಯಲ್ಲಿ ನೀರೂರುವುದು ಪಕ್ಕಾ. ತುಪ್ಪದಲ್ಲೇ ಮಾಡುವ, ತುಪ್ಪದಲ್ಲಿ ಹುರಿದ ಮಸಾಲೆಗಳಿಂದ ಮಾಡುವ ಈ ಭಕ್ಷ್ಯವನ್ನು ಸವಿತಾ ಇದ್ದರೆ ಕಳೆದುಹೋಗುವುದು ಗ್ಯಾರಂಟಿ. ಈ ಖಾದ್ಯವನ್ನು ಸಾಮಾನ್ಯವಾಗಿ ಸ್ಟಾರ್ಟರ್ ಅಥವಾ ಸೈಡ್ ಡಿಶ್ ಆಗಿ ಬಡಿಸಲಾಗುತ್ತದೆ. ರುಚಿಕರವಾದ, ಮಸಾಲೆಯುಕ್ತ ಖಾದ್ಯ ಇಷ್ಟಪಡುವವರು ಈ ರೆಸಿಪಿಯನ್ನು ಪ್ರಯತ್ನಿಸಬಹುದು. ಚಿಕನ್ ಘೀ ರೋಸ್ಟ್ ರೆಸಿಪಿ ತಯಾರಿಸುವುದು ಅಂಥಾ ಕಷ್ಟವೇನಲ್ಲ, ಬನ್ನಿ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಚಿಕನ್ ಘೀ ರೋಸ್ಟ್ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಚಿಕನ್- 1 ಕೆ.ಜಿ, ಬ್ಯಾಡಗಿ ಮೆಣಸು- 20, ಖಾರದ ಅಥವಾ ಗುಂಟೂರು ಮೆಣಸು- 6, ಅರಶಿನ- 1 ಟೀ ಚಮಚ, ಮೆಣಸಿನ ಪುಡಿ- ಅರ್ಧ ಟೀ ಚಮಚ, ಮೊಸರು- 1 ಕಪ್, ಧನಿಯಾ ಬೀಜ- 4 ಟೀ ಚಮಚ, ಜೀರಿಗೆ- 1 ಟೀ ಚಮಚ, ಮೆಂತ್ಯ ಕಾಳು- ¼ ಟೀ ಚಮಚ, ಕಾಳುಮೆಣಸು- ½ ಟೀ ಚಮಚ, ಸೋಂಪು- ¼ ಟೀ ಚಮಚ, ಬೆಳ್ಳುಳ್ಳಿ- 12 ಎಸಳು, ಶುಂಠಿ- 1 ಸಣ್ಣ ತುಂಡು, ಹುಣಸೆಹಣ್ಣು- ಒಂದು ನಿಂಬೆಗಾತ್ರದಷ್ಟು, ಈರುಳ್ಳಿ- ಅರ್ಧ, ಚೆಕ್ಕೆ- 1 ಸಣ್ಣ ತುಂಡು, ತುಪ್ಪ- ಅರ್ಧ ಕಪ್, ಕರಿಬೇವು ಎಲೆ- ಬೇಕಾಗುವಷ್ಟು, ಕೊತ್ತಂಬರಿ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲಿಗೆ ಬ್ಯಾಡಗಿ ಮೆಣಸು ಹಾಗೂ ಗುಂಟೂರು ಮೆಣಸಿನಕಾಯಿಯನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ 20 ನಿಮಿಷಗಳ ಕಾಲ ನೆನೆಸಿಡಿ. ಈ ವೇಳೆ ಚಿಕನ್‍ಗೆ ಅರಶಿನ, ಮೆಣಸಿನಪುಡಿ, ಮೊಸರು, ಉಪ್ಪು ಹಾಕಿ ಮಿಕ್ಸ್ ಮಾಡಿ. ಅರ್ಧ ಗಂಟೆ ಕಾಲ ಹಾಗೆಯೇ ಇಡಿ. ಈ ವೇಳೆ ಧನಿಯಾ ಬೀಜ, ಜೀರಿಗೆ, ಮೆಂತ್ಯ ಕಾಳು, ಸೋಂಪು, ಚೆಕ್ಕೆ, ಕಾಳುಮೆಣಸು, ಈರುಳ್ಳಿ, ಬೆಳ್ಳುಳ್ಳಿ ಇವೆಲ್ಲವನ್ನೂ ತುಪ್ಪದಲ್ಲಿ ಹುರಿಯಿರಿ. ನಂತರ ಹುರಿದಿಟ್ಟ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ. ಜತೆಗೆ ಶುಂಠಿ, ಹುಣಸೆಹಣ್ಣು ಹಾಗೂ ನೆನೆಸಿಟ್ಟ ಒಣಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಇನ್ನೊಂದೆಡೆ ಸ್ಟೌವ್‌ನಲ್ಲಿ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಮ್ಯಾರಿನೇಟ್ ಮಾಡಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ ಫ್ರೈ ಮಾಡಿ. ಸ್ವಲ್ಪ ಹೊತ್ತು ಬೇಯಲು ಬಿಡಿ. ಚಿಕನ್ ಮಾಂಸ ಬೆಂದ ನಂತರ ಇದಕ್ಕೆ ರುಬ್ಬಿಟ್ಟಿರುವ ಮಸಾಲೆ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಬೇಯುವ ಹಂತದಲ್ಲಿ ಮತ್ತಷ್ಟು ತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಮಸಾಲೆಗಳಿಂದ ತುಪ್ಪ ಬೇರ್ಪಟ್ಟಿದ್ದರೆ ಚಿಕನ್ ಘೀ ರೋಸ್ಟ್ ರೆಸಿಪಿ ರೆಡಿಯಾಗಿರುತ್ತದೆ.
ಈ ಖಾದ್ಯವನ್ನು ನೀರು ದೋಸೆ ಜತೆ ಸವಿಯಲು ಬಹಳ ರುಚಿಕರವಾಗಿರುತ್ತದೆ. ಇಡ್ಲಿ, ಅನ್ನದ ಜತೆಯೂ ಸವಿಯಲು ಸೂಪರ್ ಕಾಂಬಿನೇಷನ್ ಅಂದ್ರೆ ತಪ್ಪಿಲ್ಲ. ಸೈಡ್ ಡಿಶ್ ಆಗಿಯೂ ಸವಿಯಬಹುದು. ನಿಮಗೂ ಚಿಕನ್ ಖಾದ್ಯ ತಿನ್ನಬೇಕು ಎಂದು ಆಸೆಯಾದರೆ ಈ ರೀತಿ ಚಿಕನ್ ಘೀ ರೋಸ್ಟ್ ಮಾಡಿ ಸವಿಯಿರಿ.