ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆದಿದ್ದು, ಸಭೆ ಬಳಿಕ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ ಎಂದರು.
ಒಳಮೀಸಲಾತಿ ಜಾರಿ ಸಂಬಂಧ ಆಯೋಗ ರಚನೆ ಮಾಡಲಾಗುತ್ತದೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗುತ್ತದೆ. ದತ್ತಾಂಶ ಸ್ವೀಕರಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ಸಮುದಾಯದ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಳಮೀಸಲಾತಿಯನ್ನು ದಲಿತ ಸಮುದಾಯ ಒಮ್ಮತದಿಂದ ಒಪ್ಪಿಕೊಂಡು ಅನುಷ್ಠಾನಕ್ಕೆ ಬೆಂಬಲ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಸೌಲಭ್ಯದ ನ್ಯಾಯಯುತ ಹಂಚಿಕೆಗೆ ಒಳಮೀಸಲಾತಿ ಅಗತ್ಯ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರಿವಾಗಿದೆ ಎಂದಿದ್ದರು.