ಬೆಂಗಳೂರು: ಯುವಕನೊಬ್ಬ ತೆಗೆದುಕೊಂಡ ಹೊಸ ಮೊಬೈಲ್ ಬಾಳಿಗೆ ಕಂಟಕವಾಗಿ ಪರಿಣಾಮಿಸಿದೆ. ಹೊಸ ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆಗೆ ಗಾಯವಾಗಿದೆ. ವೈಟ್ ಫೀಲ್ಡ್ನಲ್ಲಿ ವಾಸವಿದ್ದ 24 ವರ್ಷದ ಯುವಕ ಪ್ರಸಾದ್ ಎನ್ನುವವರು ಅಕ್ಟೋಬರ್ ತಿಂಗಳಲ್ಲಿ ಒನ್ ಪ್ಲಸ್(1+) ಕಂಪನಿಯ ಮೊಬೈಲ್ ಖರೀದಿಸಿದ್ದರು. ಯುವಕ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಬ್ಲಾಸ್ಟ್ ಆಗಿದೆ.
ಈ ಘಟನೆ ಮೊಬೈಲ್ ಶೋ ರೂಂ ಗಮನಕ್ಕೆ ಬರುತ್ತಿದ್ದಂತೆ ಮೆಡಿಕಲ್ ವೆಚ್ಚದ ಜೊತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ.
ಇತ್ತ ಸರ್ಜರಿಗೆ ಬರೋಬ್ಬರಿ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಮೊಬೈಲ್ ಸೆಂಟರ್ಗೆ ಹೋದ್ರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ.
ವೈಟ್ ಫೀಲ್ಡ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್, ಈಗ ಮೊಬೈಲ್ ಬ್ಲಾಸ್ಟ್ನಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.. ಕೆಲಸ ಮಾಡದೆ ವಿಶ್ರಾಂತಿ ಪಡೆದರೆ ಹಣ ಯಾರು ಕೊಡುತ್ತಾರೆ ಎಂಬಂತಹ ಪ್ರಶ್ನೆ ಎದುರಾಗಿದೆ. ಈ ಹಿನ್ನಲೆ ಕಂಪನಿಯವರೇ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿ ವಕೀಲರ ಮೊರೆ ಹೋಗಲು ಯುವಕ ಮುಂದಾಗಿದ್ದಾನೆ.