ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಬಾಲಭವನದಲ್ಲಿ ಖಾಲಿ ಇರುವ ಕಚೇರಿ ಸಹಾಯಕರನ್ನು ಸಂಚಿತ ವೇತನದ (ಗೌರವಧನ) ಆಧಾರದ ಮೇಲೆ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಜುಲೈ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಜಿಲ್ಲಾ ಬಾಲಭವನ ಕಚೇರಿಯಲ್ಲಿ ಕಛೇರಿ ಸಹಾಯಕರು-1 ಹುದ್ದೆ ಖಾಲಿ ಇದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ ಪಿ.ಯು.ಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆಯೊಂದಿಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ಗೌರವಧನ ರೂ.10,000/- ನೀಡಲಾಗುವುದು. ಅರ್ಜಿಗಳನ್ನು ಜುಲೈ 30 ರಂದು ಸಂಜೆ 5 ಗಂಟೆಯ ಒಳಗಾಗಿ ಜಿಲ್ಲಾ ಬಾಲಭವನ ಕಚೇರಿಗೆ ಸಲ್ಲಿಸಬೇಕು. ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಷರತ್ತುಗಳು: ಗಣಕಯಂತ್ರದಲ್ಲಿ ಎಂಎಸ್ ಆಫೀಸ್ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪರಿಣಿತಿ ಹೊಂದಿರಬೇಕು. ಸರ್ಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷದ ಅನುಭವ ಹೊಂದಿರಬೇಕು. ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು. ನೇಮಕಗೊಂಡ ಅಭ್ಯರ್ಥಿಯು ಕಾಲ ಕಾಲಕ್ಕೆ ರಾಜ್ಯ ಬಾಲಭವನ ಸೊಸೈಟಿಯ ಕಾರ್ಯದರ್ಶಿಗಳು ನೀಡುವ ಸೂಚನೆ, ಮಾರ್ಗದರ್ಶನಗಳಂತೆ ಕಾರ್ಯನಿರ್ವಹಿಸಬೇಕು. ಈ ಹುದ್ದೆಯು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿದ್ದು, ತಮ್ಮ ಸೇವೆಯು ತೃಪ್ತಿಕರವಾಗಿಲ್ಲವೆಂದು ಕಂಡುಬಂದಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ನೋಟೀಸ್ ನೀಡದೆ ತೆಗೆದು ಹಾಕುವ ಅಧಿಕಾರ ಜಿಲ್ಲಾಮಟ್ಟದ ಸಮಿತಿಗೆ ಇರುತ್ತದೆ. ಈ ಹುದ್ದೆಯು 11 ತಿಂಗಳಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅರ್ಜಿಯೊಂದಿಗೆ ಅಗತ್ಯ ದೃಢೀಕರಣ ಪತ್ರಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಮುದ್ದಾಂ ಸಲ್ಲಿಸಬೇಕು. ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಆಯ್ಕೆಯಾದ ಅಭ್ಯರ್ಥಿಯು ಕೇಂದ್ರ ಸ್ಥಾನದಲ್ಲಿ ವಾಸಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವವರು ನಿಗಧಿತ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರದ ವೀರವನಿತೆ ಓಬವ್ವ ಕ್ರೀಡಾಂಗಣ ಹತ್ತಿರದ, ಜಿಲ್ಲಾ ಬಾಲಭವನ ಕಾರ್ಯಾಲಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08194-235259, ಮೊಬೈಲ್ ನಂಬರ್ 7259551325 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ತಿಳಿಸಿದ್ದಾರೆ.