ದುಬೈ: ಇರಾನ್ನಲ್ಲಿ ಇಸ್ಲಾಮಿಕ್ ಸ್ಕಾರ್ಫ್ (ಹಿಜಾಬ್) ಧರಿಸುವ ವಿಚಾರವಾಗಿ 22 ವರ್ಷದ ಯುವತಿ ಮಹ್ಸಾ ಅಮಿನಿ ಮೃತಪಟ್ಟು ಒಂದು ವರ್ಷ ಕಳೆದಿದೆ. ಇಡೀ ದೇಶದ ತುಂಬಾ ಹಿಜಾಬ್ ಕಿಚ್ಚು ಹಬ್ಬಿದೆ. ಇದರ ನಡುವೆ ಸಾರ್ವಜನಿಕವಾಗಿ ಹಿಜಾಬ್ ಧರಿಸಲು ನಿರಾಕರಿಸುವ ಮಹಿಳೆಯರು ಮತ್ತು ಅವರನ್ನು ಬೆಂಬಲಿಸುವವರಿಗೆ ಭಾರಿ ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಇರಾನ್ ಸಂಸತ್ತು ಅಂಗೀಕರಿಸಿದೆ. ಇದರ ಪ್ರಕಾರ, ಸಾರ್ವಜನಿಕವಾಗಿ ‘ಹಿಜಾಬ್’ ಧರಿಸದಿದ್ದರೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಹಿಜಾಬ್ ಧರಿಸದ ಮಹಿಳೆಯರಿಗೆ ಸೇವೆ ಸಲ್ಲಿಸುವ ವ್ಯಾಪಾರಿಗಳಿಗೂ ಈ ಕಾಯ್ದೆ ಅನ್ವಯಿಸುತ್ತದೆ. ಇರಾನ್‌ನ 290 ಸದಸ್ಯ ಬಲದ ಸಂಸತ್ತಿನಲ್ಲಿ 152 ಸಂಸದರ ಬೆಂಬಲದೊಂದಿಗೆ ಈ ಮಸೂದೆಗೆ ಅನುಮೋದನೆ ಸಿಕ್ಕಿದೆ. ಈ ವಿಧೇಯಕವು ಸಾಂವಿಧಾನಿಕ ಕಾವಲುಗಾರನಾಗಿ ಕಾರ್ಯನಿರ್ವಹಿಸುವ ಧಾರ್ಮಿಕ ಮುಖಂಡರನ್ನು ಒಳಗೊಂಡ ಗಾರ್ಡಿಯನ್ ಕೌನ್ಸಿಲ್‌ನಿಂದ ಅನುಮೋದನೆ ಪಡೆಯಬೇಕಿದೆ. ಮುಂದಿನ ಮೂರು ವರ್ಷ ಈ ಕಾನೂನು ಜಾರಿಯಲ್ಲಿರುತ್ತದೆ.