ಕಣ್ಣೂರು: ಕಣ್ಣೂರಿನ ಆರಳಂ ವನ್ಯಜೀವಿ ಕೇಂದ್ರದ ಚಾವಚ್ಚದಲ್ಲಿ ಸೋಮವಾರ ಮಧ್ಯಾಹ್ನ ಐದು ಮಂದಿಯ ನಕ್ಸಲರ ಗ್ಯಾಂಗ್ ಅರಣ್ಯ ಪಾಲಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇವರನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ನರಿಕ್ಕಡವು ಅರಣ್ಯ ಠಾಣೆಯಿಂದ ಅಂಬಲಪ್ಪರ ಕ್ಯಾಂಪ್ ಶೆಡ್‌ಗೆ ತೆರಳುತ್ತಿದ್ದ ವೇಳೆ ಎಬಿನ್, ಸಿಜೋ ಮತ್ತು ಬೋಬಸ್ ಎಂಬ ಮೂವರು ಅರಣ್ಯ ಪಾಲಕರ ಮೇಲೆ ನಕ್ಸಲರ ಗ್ಯಾಂಗ್ ಗುಂಡು ಹಾರಾಟ ನಡೆಸಿತ್ತು.
ಅರಣ್ಯ ಪಾಲಕರ ಮುಖಾಮುಖಿ ನೋಡಿ ಆಘಾತಕ್ಕೊಳಗಾದ ನಕ್ಸಲರ ತಂಡ ಕ್ಯಾಂಪಿಂಗ್ ಸಾಮಗ್ರಿಗಳು ಮತ್ತು ಆಹಾರವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಈ ವೇಳೆ ಗುಂಡಿನ ದಾಳಿ ನಡೆಸಿ ಬೆದರಿಸಿ ನಕ್ಸಲ್ ಟೀಂ ಪರಾರಿಯಾಗಿತ್ತು.
ಘಟನೆಯ ಹಿನ್ನಲೆಯಲ್ಲಿ ಈಗಾಗಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ,ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಇವಿಷ್ಟೇ ಅಲ್ಲದೇ ನಕ್ಸಲರ ವಿರುದ್ದ ಕಾರ್ಯಾಚರಣೆ ನಡೆಸುವ ತಂಡವಾದ ತಂಡರ್ ಬೋಲ್ಟ್ ಕೂಡಾ ಶೋಧ ಕಾರ್ಯಕ್ಕಾಗಿ ಆರಳಂಗೆ ಆಗಮಿಸಿದೆ.
ಗುಂಡು ಹಾರಾಟ ನಡೆದ ಸ್ಥಳ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರನಿಗಾ ಇರಿಸಲಾಗಿದೆ. ಈ ಪ್ರದೇಶದಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆಂದು ಹಿಂದೆ ವರದಿಯಾಗಿದ್ದರೂ ಇದೇ ಮೊದಲ ಬಾರಿಗೆ ಗುಂಡು ಹಾರಾಟ ನಡೆದಿದೆ.